ADVERTISEMENT

ಛತ್ತೀಸಗಢ | ಎನ್‌ಕೌಂಟರ್‌ನಲ್ಲಿ 31 ನಕ್ಸಲರು ಸಾವು: ಇಬ್ಬರು ಭದ್ರತಾ ಸಿಬ್ಬಂದಿ ಹತ

ಪಿಟಿಐ
Published 9 ಫೆಬ್ರುವರಿ 2025, 8:55 IST
Last Updated 9 ಫೆಬ್ರುವರಿ 2025, 8:55 IST
<div class="paragraphs"><p>ಎನ್‌ಕೌಂಟರ್‌</p></div>

ಎನ್‌ಕೌಂಟರ್‌

   

ಬಿಜಾಪುರ್, (ಛತ್ತೀಸಗಢ): ಬಿಜಾಪುರ್ ಜಿಲ್ಲೆಯ ಇಂದ್ರಾವತಿ ರಾಷ್ಟ್ರೀಯ ಉದ್ಯಾನ ಅರಣ್ಯದಲ್ಲಿ ಭದ್ರತಾ ಸಿಬ್ಬಂದಿ ಜೊತೆಗೆ ನಡೆದ ಗುಂಡಿನ ಚಕಮಕಿಯಲ್ಲಿ 31 ನಕ್ಸಲರು ಭಾನುವಾರ ಹತರಾಗಿದ್ದಾರೆ. ಇದರೊಂದಿಗೆ ಈ ವರ್ಷ ಹತರಾದ ನಕ್ಸಲರ ಸಂಖ್ಯೆ 81ಕ್ಕೆ ಏರಿದ

‘ನಕ್ಸಲ್‌ ಸಂಘಟನೆಗಳ ವಿರುದ್ಧ ಅರಣ್ಯ ವಲಯದಲ್ಲಿ ಕೈಗೊಂಡಿದ್ದ ಕಾರ್ಯಾಚರಣೆ ವೇಳೆ ಗುಂಡಿನ ಚಕಮಕಿ ನಡೆಯಿತು’ ಎಂದು ಬಸ್ತರ್ ವಲಯದ ಐಜಿಪಿ ಪಿ.ಸುಂದರರಾಜ್ ಅವರು ತಿಳಿಸಿದರು.

ADVERTISEMENT

ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆಯ ತಲಾ ಒಬ್ಬ ಸಿಬ್ಬಂದಿ ಗುಂಡಿನ ಚಕಮಕಿಯಲ್ಲಿ ಮೃತಪಟ್ಟರು. ಇನ್ನಿಬ್ಬರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅವರು, ಅಪಾಯದಿಂದ ಪಾರಾಗಿದ್ದಾರೆ ಎಂದೂ ಐಜಿಪಿ ಸುದ್ದಿಗಾರರಿಗೆ ತಿಳಿಸಿದರು.

ಕಾರ್ಯಾಚರಣೆ ನಡೆದ ಸ್ಥಳವು ಛತ್ತೀಸಗಢ ಮತ್ತು ಮಹಾರಾಷ್ಟ್ರ–ತೆಲಂಗಾಣ ಗಡಿಗೆ ಹೊಂದಿಕೊಂಡಿದೆ. ಅಲ್ಲಿ ಎ.ಕೆ–47, ಎಸ್‌ಎಲ್ಆರ್, ಪಾಯಿಂಟ್‌ 303 ರೈಫಲ್, ಬ್ಯಾರಲ್ ಗ್ರೆನೇಡ್ ಲಾಂಚರ್‌ಗಳು, ಸ್ಫೋಟಕಗಳು ಸೇರಿದಂತೆ ದೊಡ್ಡ ಪ್ರಮಾಣದ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

‘ಜಿಲ್ಲಾ ಮೀಸಲು ಪಡೆ, ವಿಶೇಷ ಕಾರ್ಯಪಡೆ ಮತ್ತು ಬಸ್ತರ್‌ ಫೈಟರ್‌, ಕೋಬ್ರಾ ಕಮಾಂಡೊಗಳು, ಕೇಂದ್ರ ಮೀಸಲು ಪಡೆ ಪೊಲೀಸರನ್ನು ಶೋಧ ಕಾರ್ಯಾಚರಣೆಗೆ ನಿಯೋಜಿಸಲಾಗಿತ್ತು. ಮೃತರು ನಕ್ಸಲ್‌ ಸಮವಸ್ತ್ರದಲ್ಲಿದ್ದರು’ ಎಂದರು.

‘ಚಕಮಕಿ ನಡೆದ ಪ್ರದೇಶದಲ್ಲಿ ವಿಸ್ತೃತವಾದ ಶೋಧ ಕಾರ್ಯ ನಡೆದಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ವರ್ಷ ಹತರಾಗಿರುವ 81 ನಕ್ಸಲರಲ್ಲಿ, 65 ಮಂದಿ ಏಳು ಜಿಲ್ಲೆಗಳ ವ್ಯಾಪ್ತಿಯುಳ್ಳ ಬಸ್ತರ್ ವಲಯದಲ್ಲಿಯೇ ಮೃತಪಟ್ಟಿದ್ದಾರೆ’ ಎಂದರು.

ಚಕಮಕಿಯಲ್ಲಿ ಇಬ್ಬರು ಸಿಬ್ಬಂದಿ ಸಾವಿನ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ವಿಷ್ಣುಸಿಂಗ್ ದೇವ್ ಅವರು, ‘ಹುತಾತ್ಮ ಸಿಬ್ಬಂದಿಯ ತ್ಯಾಗ ನಿರರ್ಥಕವಾಗುವುದಿಲ್ಲ. ನಕ್ಸಲ್‌ ಪಿಡುಗು ಕ್ಯಾನ್ಸರ್ ಇದ್ದಂತೆ. ಅದರ ನಿರ್ಮೂಲನೆ ಖಚಿತ’ ಎಂದು ಹೇಳಿದರು. 

ನಕ್ಸಲರಿಗೆ ಸುರಕ್ಷಿತ ತಾಣ ಎಂದು ಭಾವಿಸಲಾಗಿದ್ದ ರಾಷ್ಟ್ರೀಯ ಉದ್ಯಾನ ವಲಯವನ್ನು ಸುಮಾರು 650 ಮಂದಿ ಭದ್ರತಾ ಸಿಬ್ಬಂದಿ ವಿವಿಧ ದಿಕ್ಕುಗಳಿಂದ ಸುತ್ತುವರಿದು, ಕಾರ್ಯಾಚರಣೆ ನಡೆಸಿದರು ಎಂದು ಗೃಹ ಸಚಿವ ವಿಜಯ್‌ ಶರ್ಮಾ ಅವರು ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಕಳೆದ ವರ್ಷ 219 ಮಂದಿ ನಕ್ಸಲರು ಹತರಾಗಿದ್ದರು. ಕಳೆದ ವರ್ಷ ಅಕ್ಟೋಬರ್ 4ರಂದು ಬಸ್ತರ್ ವಲಯದ ಅಬೂಝ್‌ಮಾಢ್‌ ಬಳಿ ನಡೆದಿದ್ದ ಗುಂಡಿಯ ಚಕಮಕಿಯಲ್ಲಿ ಗರಿಷ್ಠ ಅಂದರೆ 38 ಮಂದಿ ನಕ್ಸಲರು ಹತರಾಗಿದ್ದರು.

ದೇಶ ಮತ್ತು ರಾಜ್ಯದಲ್ಲಿ ನಕ್ಸಲ್ ಪಿಡುಗಿನ ಅಂತ್ಯ ಖಚಿತ. ಮೋದಿ ಶಾ ಅವರ ಮಾರ್ಗದರ್ಶನದಲ್ಲಿ 2026ರ ಮಾರ್ಚ್‌ ಒಳಗೆ ಇದು ಪೂರ್ಣ ನಿರ್ಮೂಲನೆ ಆಗಲಿದೆ
ವಿಷ್ಣು ಸಿಂಗ್ ದೇವ್ ಸಾಯಿ ಮುಖ್ಯಮಂತ್ರಿ ಛತ್ತೀಸಗಢ
ಇದು ನಕ್ಸಲ್‌ ಅಂದೋಲನಕ್ಕೆ ಬಿದ್ದಿರುವ ದೊಡ್ಡಪೆಟ್ಟು. ನಕ್ಸಲ್ ಹೋರಾಟದ ವಿರುದ್ಧದ ಅಂತಿಮ ಹಂತದ ಕಾರ್ಯಾಚರಣೆ ಈಗ ನಡೆಯುತ್ತಿದೆ
ದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಮಹಾರಾಷ್ಟ್ರ

‘ನಕ್ಸಲ್‌ಮುಕ್ತ’ ಗುರಿ ಸಾಧನೆ ಯತ್ನದಲ್ಲಿ ದೊಡ್ಡ ಯಶಸ್ಸು–ಶಾ

‘ನಕ್ಸಲರನ್ನು 2026ರ ಮಾರ್ಚ್‌ 31ರೊಳಗೆ ಪೂರ್ಣ ನಿರ್ಮೂಲನೆ ಮಾಡುತ್ತೇವೆ. ಆ ಬಳಿಕ ಈ ಪಿಡುಗಿನಿಂದ ಜೀವಹಾನಿ ಆಗುವುದಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಲ್ಲಿ ಹೇಳಿದರು. ಛತ್ತೀಸಗಢದಲ್ಲಿ 31 ನಕ್ಸಲರ ಹತ್ಯೆ ಕುರಿತ ಬೆಳವಣಿಗೆಗೆ ‘ಎಕ್ಸ್‌’ನಲ್ಲಿ ಅವರು ಪ್ರತಿಕ್ರಿಯಿಸಿದ್ದಾರೆ. ‘ನಕ್ಸಲ್‌ಮುಕ್ತ ಭಾರತ ನಿರ್ಮಾಣ’ ಗುರಿ ಸಾಧನೆಯ ದಿಸೆಯಲ್ಲಿ ಛತ್ತೀಸಗಢದಲ್ಲಿ ಭದ್ರತಾ ಪಡೆಗಳು ದೊಡ್ಡ ಯಶಸ್ಸು ಸಾಧಿಸಿವೆ’ ಎಂದು ಶ್ಲಾಘಿಸಿದ್ದಾರೆ. 

ಉಪ ಠಾಣೆ ಮೇಲೆ ದಾಳಿ: ಶಸ್ತ್ರಾಸ್ತ್ರ ಲೂಟಿ

‘ಮಣಿಪುರದ ತೌಬಾಲ್ ಜಿಲ್ಲೆಯ ಕಾಕ್ಮಯಿಯಲ್ಲಿ, ಅಪರಿಚಿತ ಬಂದೂಕುಧಾರಿಗಳು ಇಂಡಿಯಾ ರಿಸರ್ವ್‌ ಬೆಟಾಲಿಯನ್‌ (ಐಆರ್‌ಬಿ) ಉಪಠಾಣೆ ಮೇಲೆ ದಾಳಿ ಮಾಡಿ, ಶಸ್ತ್ರಾಸ್ತ್ರ ಲೂಟಿ ಮಾಡಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

‘ಶನಿವಾರ ರಾತ್ರಿ ಕೃತ್ಯ ನಡೆದಿದೆ. ಹಲವು ವಾಹನಗಳಲ್ಲಿ ಬಂದಿದ್ದ ಬಂದೂಕುಧಾರಿಗಳು, ಉಪಠಾಣೆಯಲ್ಲಿ ಇದ್ದ ಆರು ಎಸ್‌ಎಲ್‌ಆರ್‌., ಮೂರು ಎ.ಕೆ ರೈಫಲ್‌ಗಳು, 277 ಗುಂಡುಗಳು, 12 ಮ್ಯಾಗಜೀನ್‌ ದೋಚಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.