ADVERTISEMENT

ಅಸ್ಸಾಂ, ಬಿಹಾರದಲ್ಲಿ ಭೀಕರ ಪ್ರವಾಹ: 35 ಲಕ್ಷ ಜನ ಬಾಧಿತರು, 251 ಮಂದಿ ಸಾವು

ಏಜೆನ್ಸೀಸ್
Published 25 ಜುಲೈ 2020, 2:32 IST
Last Updated 25 ಜುಲೈ 2020, 2:32 IST
ಪ್ರವಾಹದ ಚಿತ್ರ
ಪ್ರವಾಹದ ಚಿತ್ರ   

ಪಟ್ನಾ/ಗುವಾಹಟಿ: ಅಸ್ಸಾಂ ಹಾಗೂ ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು ಸುಮಾರು 35 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೆ ಒಳಗಾಗಿದ್ದು 251 ಜನರು ಸಾವಿಗೀಡಾಗಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣ ಅಧಿಕಾರಿಗಳು ತಿಳಿಸಿದ್ದಾರೆ.

ಅಸ್ಸಾಂನ 26 ಜಿಲ್ಲೆಗಳು ಹಾಗೂ ಬಿಹಾರದ ಉತ್ತರ ಭಾಗದಲ್ಲಿ ಭೀಕರ ಪ್ರವಾಹ ಉಂಟಾಗಿದ್ದು ಸುಮಾರ 35 ಲಕ್ಷ ಮಂದಿ ಬಾಧಿತರಾಗಿದ್ದು, ಅಸ್ಸಾಂನಲ್ಲಿ 119 ಜನರು ಹಾಗೂ ಬಿಹಾರದಲ್ಲಿ 132 ಜನರು ಮೃತಪಟ್ಟಿದ್ದಾರೆ.

ಅಸ್ಸಾಂನಾದ್ಯಂತ ಸುಮಾರು 1.19 ಲಕ್ಷ ಹೆಕ್ಟೇರ್‌ ಕೃಷಿ ಭೂಮಿ ನೀರಿನಿಂದ ಜಲಾವೃತಗೊಂಡಿದೆ. ಹಲವೆಡೆ 587 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, 1.25 ಲಕ್ಷ ಜನರು ಆಶ್ರಯ ಪಡೆದಿದ್ದಾರೆ.

ADVERTISEMENT

ಅಸ್ಸಾಂ ಮುಖ್ಯಮಂತ್ರಿ ಸರ್ವಾನಂದ ಸೋನೊವಾಲ್ ಮಾತನಾಡಿ, ‘ಪ್ರವಾಹದಿಂದ ಹಲವು ಜಿಲ್ಲೆಗಳ ಮೇಲೆ ತೀವ್ರ ಪರಿಣಾಮ ಉಂಟಾಗಿದೆ. ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೋವಿಡ್‌ ಸೋಂಕು, ಪ್ರವಾಹ, ಭೂಕುಸಿತದ ವಿರುದ್ಧ ಏಕಕಾಲದಲ್ಲಿ ಹೋರಾಡಬೇಕಾಗಿದೆ. ಪರಿಹಾರ ಕಾರ್ಯಗಳನ್ನು ಚುರುಕುಗೊಳಿಸಲಾಗಿದ್ದು, ಜನರು ಆತಂಕಪಡುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

ನೇಪಾಳದಲ್ಲಿ ಭಾರಿ ಮಳೆಯ ಪರಿಣಾಮ ಬಿಹಾರದ ಉತ್ತರ ಭಾಗದ 10 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಚಂಪಾರಣ್ಯ, ಗೋಪಾಲ್‌ ಗಂಜ್‌ ಹಾಗೂ ದರ್ಭಾಂಗ್‌ ಜಿಲ್ಲೆಗಳು ಹೆಚ್ಚು ಭಾದಿತವಾಗಿವೆ. ಸುಮಾರು 7 ಲಕ್ಷಕ್ಕೂ ಹೆಚ್ಚು ಜನರು ತೊಂದರೆಗೆ ಒಳಗಾಗಿದ್ದಾರೆ. 3.25 ಲಕ್ಷ ಜನರು ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ ಎಂದು ಬಿಹಾರದ ಸರ್ಕಾರಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಪತ್ತು ನಿರ್ವಹಣೆ ಪಡೆ ಅಧಿಕಾರಿಗಳು, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ಬಿಹಾರ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಪ್ರವಾಹಕ್ಕೆ ಸಿಲುಕಿರುವವರನ್ನು ರಕ್ಷಣೆ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.