ADVERTISEMENT

ಪಿಎಫ್‌ಐ ಜತೆ ನಂಟು; ಹಾಥರಸ್‌ಗೆ ತೆರಳುತ್ತಿದ್ದ ನಾಲ್ವರ ಬಂಧನ

ಪಿಟಿಐ
Published 6 ಅಕ್ಟೋಬರ್ 2020, 8:20 IST
Last Updated 6 ಅಕ್ಟೋಬರ್ 2020, 8:20 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲಖನೌ: ಹಾಥರಸ್‌ಗೆ ತೆರಳುತ್ತಿದ್ದ ನಾಲ್ವರನ್ನು ಸೋಮವಾರ ಮಥುರಾ ಸಮೀಪ ಪೊಲೀಸರು ಬಂಧಿಸಿದ್ದಾರೆ.

ಪಾಪುಲರ್ ಫ್ರಂಟ್‌ ಆಫ್ ಇಂಡಿಯಾ (ಪಿಎಫ್‌ಐ) ಜತೆ ನಂಟು ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯಿಂದ ಹಾಥರಸ್‌ನತ್ತಅನುಮಾನಾಸ್ಪದ ವ್ಯಕ್ತಿಗಳು ತೆರಳುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಮಥುರಾದ ಮಾಥ್‌ ಟೋಲ್‌ ಪ್ಲಾಝಾ ಬಳಿ ಈ ನಾಲ್ವರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ವಿಚಾರಣೆ ವೇಳೆ ಈ ನಾಲ್ವರು ಪಿಎಫ್‌ಐ ಮತ್ತು ಅದರ ಸಹ ಸಂಘಟನೆ ಕ್ಯಾಂಪಸ್‌ ಫ್ರಂಟ್ ಆಫ್ ಇಂಡಿಯಾ ಜತೆ ಸಂಪರ್ಕ ಹೊಂದಿದ್ದಾರೆಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಂಧಿತರನ್ನು ಮುಝಾಫರ್‌ನಗರದ ಆತಿಕ್ ಉರ್ ರೆಹಮಾನ್‌, ಮಲಪ್ಪುರಂನ ಸಿದ್ದಿಕಿ, ಬಹರೈಚದ ಮಸೂದ್‌ ಅಹ್ಮದ್‌ ಮತ್ತು ರಾಮ್‌ಪುರದ ಅಲಮ್‌ ಎಂದು ಗುರುತಿಸಲಾಗಿದೆ. ಇವರು ಕಾರಿನಲ್ಲಿ ಹಾಥರಸ್‌ನತ್ತ ಹೊರಟಿದ್ದರು. ಬಂಧಿತರಿಂದ ಮೊಬೈಲ್‌ಫೋನ್‌, ಲ್ಯಾಪ್‌ಟಾಪ್‌ ಮತ್ತು ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲವು ಸಾಹಿತ್ಯ ಪತ್ರಗಳನ್ನು ವಶಪಡಿಸಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ದೇಶಾದ್ಯಂತ ನಡೆದ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಪ್ರತಿಭಟನೆಗೆ ಪಿಎಫ್‌ಐ ಸಂಘಟನೆ ಹಣಕಾಸು ನೆರವು ನೀಡಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ, ಸಂಘಟನೆಯನ್ನು ನಿಷೇಧಿಸಬೇಕೆಂಬ ಒತ್ತಾಯವೂ ಕೇಳಿಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.