ADVERTISEMENT

ಉಡಾನ್‌: 5 ಲಕ್ಷ ಪ್ರಯಾಣಿಕರ ಸಂಚಾರ

ಉಡಾನ್‌: ಚೆನ್ನೈ–ಹುಬ್ಬಳ್ಳಿ ಮಾರ್ಗಕ್ಕೆ ನೀರಸ ಪ್ರತಿಕ್ರಿಯೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 19:28 IST
Last Updated 7 ಅಕ್ಟೋಬರ್ 2018, 19:28 IST
s
s   

ನವದೆಹಲಿ: ಪ್ರಾದೇಶಿಕವಾಗಿ ವಾಯುಯಾನ ಸಂಪರ್ಕ ಕಲ್ಪಿಸುವ ‘ಉಡಾನ್‌’ ಯೋಜನೆಯ ಸೌಲಭ್ಯವನ್ನು ಇದುವರೆಗೆ ಸುಮಾರು 5 ಲಕ್ಷ ಮಂದಿ ಪಡೆದುಕೊಂಡಿದ್ದಾರೆ.

ಕಳೆದ ವರ್ಷ ಏಪ್ರಿಲ್‌ 27ರಂದು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಈ ಅವಧಿಯಲ್ಲಿ 15,723 ವಿಮಾನಗಳು ಈ ಯೋಜನೆ ಅಡಿ ಹಾರಾಟ ನಡೆಸಿವೆ. ಆದರೆ, ಚೆನ್ನೈ–ಹುಬ್ಬಳ್ಳಿ ಮಾರ್ಗದಲ್ಲಿ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೇವಲ ಶೇಕಡ 25ರಷ್ಟು ಸೀಟುಗಳು ಭರ್ತಿಯಾಗಿವೆ ಎಂದು ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರ (ಎಎಐ) ತಿಳಿಸಿದೆ.

ಚೆನ್ನೈ–ಮೈಸೂರು ಮಾರ್ಗದಲ್ಲಿ ಶೇಕಡ 74ರಷ್ಟು ಸೀಟುಗಳು ಭರ್ತಿಯಾಗಿದೆ. ಮುಂಬೈ–ಪೋರಬಂದರ್‌ ಮತ್ತು ಮುಂಬೈ–ಕಾಂಡ್ಲಾ ಮಾರ್ಗಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೇಕಡ 93ರಷ್ಟು ಸೀಟುಗಳು ಭರ್ತಿಯಾಗಿದ್ದವು ಎಂದು ಅದು ತಿಳಿಸಿದೆ.

ADVERTISEMENT

‘ಉಡಾನ್‌’ ಯೋಜನೆಗೆ ಗುರುತಿಸಲಾಗಿದ್ದ ನಗರಗಳಿಂದ ಒಟ್ಟು 7.5 ಲಕ್ಷ ಪ್ರಯಾಣಿಕರು ಎಂಟು ಏರ್‌ಲೈನ್ಸ್‌ಗಳ ವಿಮಾನಗಳಿಂದ ಸಂಚರಿಸಿದ್ದರು. ಇದರಲ್ಲಿ 7.5 ಲಕ್ಷ ವಾಯುಯಾನ ಪ್ರಯಾಣಿಕರಲ್ಲಿ 4.58 ಲಕ್ಷ ಪ್ರಯಾಣಿಕರಿಗೆ ‘ಉಡಾನ್‌’ ಯೋಜನೆಯ ರಿಯಾಯಿತಿ ದರದಲ್ಲಿ ಟಿಕೆಟ್‌ಗಳು ಲಭ್ಯವಾಗಿವೆ. ಉಳಿದ ಪ್ರಯಾಣಿಕರು ಎಂದಿನ ದರಗಳಲ್ಲೇ ಸಂಚರಿಸಿದ್ದರು. ಉಡಾನ್‌ ಯೋಜನೆ ಅಡಿಯಲ್ಲಿ ಪ್ರತಿ ಗಂಟೆ ವಿಮಾನಯಾನಕ್ಕೆ ₹2500 ನಿಗದಿಪಡಿಸಲಾಗಿದೆ.

ದಕ್ಷಿಣ ಭಾರತದಲ್ಲಿ ಹೈದರಾಬಾದ್‌–ಪುದುಚೇರಿ, ಸೆಲಂ–ಚೆನ್ನೈ ಮಾರ್ಗ ಸಹ ಅತಿ ಹೆಚ್ಚು ಜನಪ್ರಿಯ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.