ADVERTISEMENT

ಭಾರತಕ್ಕೆ ಬಂದ 5 ವರ್ಷಗಳ ಬಳಿಕ ಗೀತಾಗೆ ಸಿಕ್ಕಳು ಹೆತ್ತಮ್ಮ!

'ಬಜರಂಗಿ ಭಾಯಿಜಾನ್‌' ಸಿನಿಮಾ ನೆನಪಿಸಿದ ನೈಜ ಘಟನೆ

ಪಿಟಿಐ
Published 11 ಮಾರ್ಚ್ 2021, 6:29 IST
Last Updated 11 ಮಾರ್ಚ್ 2021, 6:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಪರ್ಬನಿ (ಮಹಾರಾಷ್ಟ್ರ): ‘9ನೇ ವಯಸ್ಸಿನಲ್ಲಿ ತನ್ನ ಪೋಷಕರಿಂದ ಬೇರ್ಪಟ್ಟು, ಪಾಕಿಸ್ತಾನ ತಲುಪಿದ್ದ ಗೀತಾ ಅವರು 2015ರಲ್ಲಿ ಭಾರತಕ್ಕೆ ಮರಳಿದ್ದರು. ಇದೀಗ ಅವರಿಗೆ ತನ್ನ ಹೆತ್ತ ತಾಯಿ ಸಿಕ್ಕಿದ್ದಾರೆ. ಅದನ್ನು ದೃಢಪಡಿಸಲು ಡಿಎನ್‌ಎ ಪರೀಕ್ಷೆ ನಡೆಸುವುದು ಬಾಕಿ ಉಳಿದಿದೆ’ ಎಂದು ಸರ್ಕಾರೇತರಸಂಸ್ಥೆಯೊಂದು ತಿಳಿಸಿದೆ.

ಈ ಮೂಲಕ ಜನಪ್ರಿಯ ‘ಬಜರಂಗಿ ಭಾಯಿಜಾನ್‌‘ ಸಿನಿಮಾದ ದೃಶ್ಯಗಳು ಮತ್ತೊಮ್ಮೆ ನೆನಪಿಗೆ ಬರುವಂತಾಗಿದೆ.

2015ರ ಅಕ್ಟೋಬರ್‌ 26ರಂದು ಆಗಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರ ಸಹಾಯದೊಂದಿಗೆ ಕಿವಿ ಕೇಳಿಸದ ಮತ್ತು ಮಾತು ಬಾರದ ಗೀತಾ ಭಾರತಕ್ಕೆ ಮರಳಿ ಬಂದಿದ್ದರು. ಬಳಿಕ ಅವರನ್ನು ಇಂದೋರ್‌ ಮೂಲದ ಸರ್ಕಾರೇತರ ಸಂಸ್ಥೆಗೆ ಸೇರಿಸಲಾಗಿತ್ತು. ಈ ಸಂಸ್ಥೆಯು ವಾಕ್‌ಶ್ರವಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತದೆ.

ADVERTISEMENT

2020ರ ಜುಲೈ 20ರಂದು ಗೀತಾ ಅವರನ್ನು ಇಂದೋರ್‌ ಮೂಲದ ಇನ್ನೊಂದು ಎನ್‌ಜಿಓ ಆನಂದ್ ಸರ್ವಿಸ್‌ ಸೊಸೈಟಿಗೆ ಹಸ್ತಾಂತರಿಸಲಾಯಿತು. ಬಳಿಕ ಆಕೆಗೆ ಮಹಾರಾಷ್ಟ್ರದ ಪರ್ಬನಿಯ‘ಪೆಹೆಲ್‌’ ಎಂಬ ಎನ್‌ಜಿಒನಲ್ಲಿ ಸಂಜ್ಞೆ ಭಾಷೆಯನ್ನು ಕಲಿಸಿಕೊಡಲಾಗುತ್ತಿತ್ತು.

ಈ ಐದು ವರ್ಷಗಳಲ್ಲಿ ಉತ್ತರಪ್ರದೇಶ, ಬಿಹಾರ, ತೆಲಂಗಾಣ, ರಾಜಸ್ಥಾನದಲ್ಲಿ ಗೀತಾ ಅವರ ಕುಟುಂಬದವರಿಗಾಗಿ ಶೋಧವನ್ನು ನಡೆಸಲಾಗಿದೆ. ಈ ವೇಳೆ ಹಲವರು ತಾವು ಗೀತಾ ಅವರ ಸಂಬಂಧಿಕರು ಎಂದೂ ಮುಂದೆ ಬಂದಿದ್ದರು.

‘ಆದರೆ ಈ ಸಮಯದಲ್ಲಿ ಮೀನಾ ವಾಘಮೋರೆ ಅವರನ್ನು ಭೇಟಿಯಾದೆವು. ಈ ವೇಳೆ ಮೀನಾ ಅವರು ತಾವು ಮಹಾರಾಷ್ಟ್ರದ ಪರ್ಬನಿ ಜಿಲ್ಲೆಯಲ್ಲಿರುವಾಗ ತನ್ನ ಮಗಳು ಕಾಣೆಯಾಗಿದ್ದಳು. ಆಕೆಯ ಹೊಟ್ಟೆಯಲ್ಲಿ ಸುಟ್ಟ ಗಾಯದ ಗುರುತಿದೆ ಎಂಬುದನ್ನು ವಿವರಿಸಿದರು’ ಎಂದು ಆನಂದ್ ಸರ್ವಿಸ್‌ ಸೊಸೈಟಿಯ ಸದಸ್ಯ ಗಜೇಂದ್ರ ಪುರೋಹಿತ್‌ ಅವರು ಹೇಳಿದರು.

‘ಮೀನಾ ಹೇಳಿದ್ದಂತೆ ಗೀತಾ ಹೊಟ್ಟೆಯಲ್ಲೂ ಸುಟ್ಟ ಗಾಯದ ಗುರುತಿದೆ. ಹಾಗಾಗಿ ಈಕೆಯೇ ಗೀತಾ ಅವರ ತಾಯಿ ಎಂಬುದನ್ನು ಶಂಕಿಸಲಾಗಿದೆ. ಆದರೆ ಡಿಎನ್‌ಎ ಪರೀಕ್ಷೆ ಬಳಿಕವೇ ಇದು ದೃಢಪಡಲಿದೆ’ ಎಂದು ಪುರೋಹಿತ್‌ ಅವರು ತಿಳಿಸಿದರು.

‘ಸದ್ಯ ಮೀನಾ ಔರಂಗಬಾದ್‌ನಲ್ಲಿ ತನ್ನ ಎರಡನೇ ಪತಿಯೊಂದಿಗೆ ವಾಸವಾಗಿದ್ದಾರೆ. ಗೀತಾ ಮೊದಲ ಬಾರಿ ತನ್ನ ಹೆತ್ತ ತಾಯಿಯನ್ನು ಭೇಟಿಯಾಗಿದ್ದಾರೆ. ಕಳೆದ ಒಂದೂವರೆ ತಿಂಗಳಿನಿಂದ ಗೀತಾ ಪರ್ಬನಿಯಲ್ಲೇಇದ್ದಾರೆ’ ಎಂದು ಅವರು ಹೇಳಿದರು.

ಈ ಬಗ್ಗೆ ಪಾಕಿಸ್ತಾನದ ಪತ್ರಿಕೆಯೂ ವರದಿ ಮಾಡಿದ್ದು, ಪಾಕಿಸ್ತಾನ ಈದಿ ವೆಲ್‌ಫೇರ್‌ ಟ್ರಸ್ಟ್‌ಗೆ ಮೊದಲ ಬಾರಿ ಗೀತಾ ಸಿಕ್ಕಿದ್ದಳು. ಈ ಸಂಸ್ಥೆಯೇ ಗೀತಾ ಅವರ ಕಾಳಜಿಯನ್ನು ವಹಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.