ADVERTISEMENT

ಮೂರು ರೈಲುಗಳ ನಡುವೆ ಅಪಘಾತ: ಹಳಿಗಳ ಮೇಲೆ ಹೆಣಗಳ ರಾಶಿ

ನೆರವಿಗೆ ಧಾವಿಸಿದ ಸ್ಥಳೀಯರು: ಹಲವು ರೈಲುಗಳ ಸಂಚಾರ ರದ್ದು

ಪಿಟಿಐ
Published 2 ಜೂನ್ 2023, 22:59 IST
Last Updated 2 ಜೂನ್ 2023, 22:59 IST
   

ಬಾಲಸೋರ್‌: ‘ರೈಲು ಹಳಿ ತಪ್ಪಿದಾಗ ಎಚ್ಚರಗೊಂಡೆ. ನನ್ನ ಮೇಲೆ ಏಕಾಏಕಿ 10–15 ಮಂದಿ ಬಿದ್ದರು. ಹೊರಗೆ ಬಂದು ನೋಡಿದರೆ ಜನರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೈಕಾಲುಗಳು ಚೆಲ್ಲಾಪಿಲ್ಲಿಯಾಗಿದ್ದವು, ಇಡೀ ಸ್ಥಳವೇ ರಕ್ತಸಿಕ್ತವಾಗಿತ್ತು. ಕೆಲವರ ಮುಖವೇ ವಿರೂಪಗೊಂಡಿತ್ತು..

ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಪ್ರಾಣಾಪಾಯದಿಂದ ಪಾರಾದ ಪ್ರಯಾಣಿಕರೊಬ್ಬರು ಘಟನೆಯನ್ನು ಎನ್‌ಡಿಟಿವಿಗೆ ವಿವರಿಸಿದ್ದು ಹೀಗೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೊಬ್ಬ ಪ್ರಯಾಣಿಕ ರೂಪಂ ಬ್ಯಾನರ್ಜಿ ಅವರು, ‘ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳೀಯರು ನೆರವಿಗೆ ಧಾವಿಸಿದರು. ಬೋಗಿಗಳ ಮಧ್ಯೆ ಸಿಲುಕಿದ ಜನರನ್ನು  ಹೊರಗೆಳೆಯುವುದು ಮಾತ್ರವಲ್ಲದೆ ನಮಗೆಲ್ಲ ನೀರು ನೀಡಿ ಉಪಚರಿಸಿದರು. ಗ್ಯಾಸ್‌ ಕಟರ್‌ ಬಳಸಿ ಬೋಗಿಗಳು ಮತ್ತು ಶೌಚಾಲಯಗಳ ಬಾಗಿಲು ತೆರೆದು ರಕ್ಷಣೆಗೆ ಮುಂದಾದರು’ ಎಂದು ಹೇಳಿದರು.

ADVERTISEMENT

ನಿರಂತರ ರಕ್ಷಣಾ ಕಾರ್ಯಾಚರಣೆ: ಸ್ಥಳದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌)  ಮೂರು ತಂಡಗಳು ಕಾರ್ಯಪ್ರವೃತ್ತವಾಗಿವೆ. ಇನ್ನೂ ಆರು ತಂಡಗಳು ಆಗಮಿಸಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ ರೈಲ್ವೆ ಬೋಗಿಗಳು ಒಂದರ ಮೇಲೆ ಒಂದು ಬಿದ್ದಿರುವುದರಿಂದ ರಕ್ಷಣಾ ಕಾರ್ಯಾಚರಣೆ ಕ್ಲಿಷ್ಟಕರವಾಗಿದೆ.  ಭಾರ ಎತ್ತುವ ಸಲುವಾಗಿ ಕ್ರೇನ್‌ಗಳನ್ನು ತರಿಸಲಾಗಿದೆ. ಕತ್ತಲಾಗಿರುವ ಕಾರಣ ಕಾರ್ಯಾಚರಣೆಗೆ ತೊಡಕುಂಟಾಗಿದೆ’ ಎಂದು ತಿಳಿಸಿದರು.

ಮೃತರ ಕುಟುಂಬಸ್ಥರಿಗೆ ಪರಿಹಾರ: ಅವಘಡದಲ್ಲಿ ಮೃತಪಟ್ಟವರ ಕುಟುಂಬಸ್ಥರಿಗೆ ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್ಆರ್‌ಎಫ್‌)ಯಿಂದ ತಲಾ ₹2 ಲಕ್ಷ ಮತ್ತು ಗಾಯಗೊಂಡವರಿಗೆ ₹50,000 ನೀಡುವುದಾಗಿ ಪ್ರಧಾನಮಂತ್ರಿಗಳ ಕಾರ್ಯಾಲಯ ತಿಳಿಸಿದೆ.

ಮೃತಪಟ್ಟ ಕುಟುಂಬದವರಿಗೆ ತಲಾ ₹10 ಲಕ್ಷ, ತೀವ್ರವಾಗಿ ಗಾಯಗೊಂಡವರಿಗೆ ₹2 ಲಕ್ಷ ಮತ್ತು ಅಲ್ಪ ಪ್ರಮಾಣದಲ್ಲಿ ಗಾಯಗೊಂಡವರಿಗೆ ₹50,000 ನೀಡಲಾಗುವುದು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಘೋಷಿಸಿದ್ದಾರೆ.

ಹಲವು ರೈಲುಗಳ ಸಂಚಾರ ರದ್ದು:  ರೈಲು ದುರಂತರ ಬಳಿಕ 18 ರೈಲುಗಳ ಸಂಚಾರವನ್ನು ರದ್ದುಗೊಳಿಸಲಾಗಿದೆ. ಏಳು ರೈಲುಗಳ ಮಾರ್ಗವನ್ನು ಬದಲಿಸಲಾಗಿದೆ.

ಹೌರಾ–ಪುರಿ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು, ಹೌರಾ–ಬೆಂಗಳೂರು ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ಮತ್ತು ಹೌರಾ–ಚೆನ್ನೈ ರೈಲುಗಳು ರದ್ದಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೋಷಯುಕ್ತ ಹಳಿಗಳೇ ದುರಂತಕ್ಕೆ ಕಾರಣ?

ನವದೆಹಲಿ: ಒಡಿಶಾ ರೈಲು ದುರಂತಕ್ಕೆ ರೈಲು ಹಳಿಗಳಲ್ಲಿನ ದೋಷವೇ ಕಾರಣವಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

‘ಹಳಿಗಳು ದೋಷಯುಕ್ತವಾಗಿದ್ದವೆಂದು ಶಂಕಿಸಲಾಗಿದೆ. ಆದರೆ, ತನಿಖೆಯ ನಂತರ ದುರಂತಕ್ಕೆ ನಿಖರ ಕಾರಣವೇನೆಂದು ತಿಳಿಯಲಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ಕೈಗೊಳ್ಳಲಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಬೈಯಪ್ಪನಹಳ್ಳಿಯಿಂದ ಹೊರಟಿದ್ದ ಹೌರಾ ಎಕ್ಸ್‌ಪ್ರೆಸ್

ಬೆಂಗಳೂರು: ಒಡಿಶಾದ ಬಹನಾಗಾ ರೈಲು ನಿಲ್ದಾಣ ಬಳಿ ರೈಲುಗಳು ಅಪಘಾತ ಸಂಭವಿಸಿದ್ದು, ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್‌ನಿಂದ ಹೌರಾಕ್ಕೆ ಹೊರಟಿದ್ದ ರೈಲಿನಲ್ಲಿದ್ದ ಹಲವು ಪ್ರಯಾಣಿಕರು ಮೃತಪಟ್ಟಿದ್ದಾರೆ. ರಾಜ್ಯದವರೂ ಇರುವ ಶಂಕೆಯಿದೆ.

ಬೈಯಪ್ಪನಹಳ್ಳಿಯಿಂದ ಹೊರಟಿದ್ದ ರೈಲು, ಕೆ.ಆರ್. ಪುರ ಹಾಗೂ ಬಂಗಾರಪೇಟೆ ನಿಲ್ದಾಣ ಮಾರ್ಗವಾಗಿ ಆಂಧ್ರಪ್ರದೇಶ ಪ್ರವೇಶಿಸಿ ಹೌರಾದತ್ತ ಹೊರಟಿತ್ತು. ಇದೇ ಹೌರಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಕರ್ನಾಟಕದ ಪ್ರಯಾಣಿಕರಿದ್ದರು. ಜೊತೆಗೆ, ಬೆಂಗಳೂರಿನಲ್ಲಿ ನೆಲೆಸಿದ್ದ ಉತ್ತರ ಪ್ರದೇಶ ಕಾರ್ಮಿಕರೂ ಪ್ರಯಾಣಿಸುತ್ತಿದ್ದರೆಂಬ ಮಾಹಿತಿ ಇದೆ. ಆದರೆ, ಯಾರೊಬ್ಬರ ಹೆಸರು ಹಾಗೂ ವಿಳಾಸ ಸದ್ಯಕ್ಕೆ ಗೊತ್ತಾಗಿಲ್ಲ.

ಪ್ರಯಾಣಿಕರ ಬಗ್ಗೆ ಮಾಹಿತಿ ಇದ್ದವರು ಅಥವಾ ಕುಟುಂಬದ ಸದಸ್ಯರು ಸಹಾಯವಾಣಿಗೆ ಕರೆ ಮಾಡಬಹುದು ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ: 080–22942666, 080–22871291 (ಬೆಂಗಳೂರು ರೈಲ್ವೆ ನಿಯಂತ್ರಣ ಕೊಠಡಿ) ಹಾಗೂ ಒಡಿಶಾದ 08249591559, 67822262286.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.