ADVERTISEMENT

ಎಚ್‌3ಎನ್‌2 ಸೋಂಕು: ದೇಶದಲ್ಲಿ 1,161 ಪ್ರಕರಣ ವರದಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2023, 16:29 IST
Last Updated 24 ಮಾರ್ಚ್ 2023, 16:29 IST
   

ನವದೆಹಲಿ (ಪಿಟಿಐ): ಕಳೆದ ಎರಡು ತಿಂಗಳಿಗೂ ಹೆಚ್ಚಿನ ಅವಧಿಯಲ್ಲಿ ಆಸ್ಪತ್ರೆಗೆ ದಾಖಲಾದ ಶ್ವಾಸಕೋಶ ಸೋಂಕಿತ ಪ್ರಕರಣಗಳಲ್ಲಿ ಶೇ 50 ಪ್ರಕರಣಗಳು ಎಚ್‌3ಎನ್‌2 ಇನ್‌ಫ್ಲುಯೆಂಜಾ ಪ್ರಕರಣಗಳಾಗಿರುವುದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್‌) ಸಮೀಕ್ಷೆಯಲ್ಲಿ ಕಂಡುಬಂದಿದೆ ಎಂದು ಕೇಂದ್ರ ಸರ್ಕಾರವು ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಎಚ್‌3ಎನ್‌2 ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗಿವೆ. ದೆಹಲಿಯಲ್ಲಿ 370, ಮಹಾರಾಷ್ಟ್ರದಲ್ಲಿ 184, ರಾಜಸ್ಥಾನದಲ್ಲಿ 180 ಮತ್ತು ಕರ್ನಾಟಕದಲ್ಲಿ 134 ಪ್ರಕರಣಗಳು ವರದಿಯಾಗಿವೆ.

ಜನವರಿ 1ರಿಂದ ಮಾರ್ಚ್‌ 20ರವರೆಗಿನ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 1,161 ಪ್ರಕರಣಗಳು ವರದಿಯಾಗಿವೆ. ತೀವ್ರತರದ ಉಸಿರಾಟದ ಸೋಂಕು (ಎಸ್‌ಎಆರ್‌ಐ) ಪ್ರಕರಣಗಳು ಮತ್ತು ಕೋವಿಡ್‌ –19 ಪ್ರಕರಣಗಳು ಸೇರಿ ಎಲ್ಲ ರೀತಿಯ ವೈರಾಣು ಸೋಂಕಿನ ಪ್ರಕರಣಗಳ ಮೇಲ್ವಿಚಾರಣೆ ಮತ್ತು ಮಾದರಿಗಳ ಪರೀಕ್ಷೆ ನಡೆಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಚಿವಾಲಯವು ಸೂಚಿಸಿದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವೆ ಭಾರತಿ ಪ್ರವೀಣ್‌ ಪವಾರ್‌ ಅವರು ಲೋಕಸಭೆಗೆ ಸಲ್ಲಿಸಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.