ADVERTISEMENT

ಕಾಶ್ಮೀರ ವಿ.ವಿ ಎನ್‌ಎಸ್‌ಯುಐ ಅಧ್ಯಕ್ಷ ಸೈಯದ್ ರಾಜೀನಾಮೆ

ಏಜೆನ್ಸೀಸ್
Published 1 ಜನವರಿ 2018, 19:50 IST
Last Updated 1 ಜನವರಿ 2018, 19:50 IST

ಶ್ರೀನಗರ: ಉಗ್ರ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್ ಕಮಾಂಡರ್‌ ರಿಯಾಜ್ ನಾಯಕೊ ಬೆದರಿಕೆವೊಡ್ಡಿದ ಕಾರಣ ಕಾಶ್ಮೀರ ವಿಶ್ವವಿದ್ಯಾಲಯದ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಅಧ್ಯಕ್ಷ ಸೈಯದ್ ಮುನೀಬ್‌ ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಎನ್‌ಎಸ್‌ಯುಐ ಭಾಗವಾಗಿರುವ ವಿದ್ಯಾರ್ಥಿಗಳನ್ನು ಉದ್ದೇಶಿಸಿ ರಿಯಾಜ್ ಮಾತನಾಡಿದ್ದು, ಆ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದ್ದಾನೆ. ಅದರಲ್ಲಿ, ‘ಕಾಶ್ಮೀರ ವಿಶ್ವವಿದ್ಯಾಲಯದ ಎನ್‌ಎಸ್‌ಯುಐನ ಭಾಗವಾಗಿರುವವರು ಶೀಘ್ರ ಅದರಿಂದ ಹೊರಗೆ ಬರಬೇಕು, ಇಲ್ಲದಿದ್ದರೆ ಪಶ್ಚಾತ್ತಾಪ ಪಡುವುದಕ್ಕೂ ಅವರಿಗೆ ಅವಕಾಶ ನೀಡುವುದಿಲ್ಲ’ ಎಂದು ಬೆದರಿಸಿದ್ದ.

‘ಎನ್‌ಎಸ್‌ಯುಐನ ಅಧ್ಯಕ್ಷ ಯಾರು, ಅದಕ್ಕಾಗಿ ಯಾರು ಕೆಲಸ ಮಾಡುತ್ತಿದ್ದಾರೆ ಎಂಬುದು ಗೊತ್ತಿದೆ. ವಿಶ್ವವಿದ್ಯಾಲಯದಲ್ಲಿ ನಮ್ಮ ಸಂಘಟನೆಯವರೂ ಇದ್ದಾರೆ. ಅವರು ಏನೂ ಗೊತ್ತಿಲ್ಲದಂತೆ ಸುಮ್ಮನೆ ಇರುವುದಿಲ್ಲ’ ಎಂದು ರಿಯಾಜ್‌ ತಿಳಿಸಿದ್ದ.

ADVERTISEMENT

ರಿಯಾಜ್ ನಾಯಕೊ, 2016ರಲ್ಲಿ ಹತ್ಯೆಗೀಡಾದ ಹಿಜ್‌ಬುಲ್‌ ಕಮಾಂಡರ್‌ ಬುರ್ಹಾನ್‌ ವಾನಿಯ ಸಮಕಾಲೀನ. ವಾನಿ ಹತ್ಯೆ ನಂತರ ಕಾಶ್ಮೀರದಲ್ಲಿ ನಡೆದ ನಾಗರಿಕರು ಮತ್ತು ಭದ್ರತಾಪಡೆಗಳ ನಡುವಿನ ಘರ್ಷಣೆಗಳಲ್ಲಿ ಇದುವರೆಗೆ ಸುಮಾರು 100 ಮಂದಿ ಮೃತಪಟ್ಟಿದ್ದಾರೆ.

ವಿಡಿಯೊ ಬಹಿರಂಗವಾದ ಕೂಡಲೇ ಹೇಳಿಕೆ ಬಿಡುಗಡೆ ಮಾಡಿರುವ ಎನ್‌ಎಸ್‌ಯುಐ ಅಧ್ಯಕ್ಷ ಸೈಯದ್‌ ಮುನೀಬ್‌, ‘ನನ್ನ ಸಹವರ್ತಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಚಾರಗಳಲ್ಲಿ ಮತ್ತು ಮೆಸ್‌ಗೆ ಸಂಬಂಧಿಸಿ ಸಹಾಯ ಮಾಡುವ ಅವಕಾಶ ಪಡೆದಿದ್ದೆ. ಇದೀಗ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.