ADVERTISEMENT

‘ಪಾಕಿಸ್ತಾನದ ಬಗ್ಗೆ ಕೇಂದ್ರದ ದ್ವಂದ್ವ ನೀತಿ’

ಭದ್ರತಾ ಸಲಹೆಗಾರರ ರಹಸ್ಯ ಮಾತುಕತೆ: ಲೋಕಸಭೆಯಲ್ಲಿ ಕಾಂಗ್ರೆಸ್‌ ಟೀಕೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 19:53 IST
Last Updated 2 ಜನವರಿ 2018, 19:53 IST
ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಮಾತನಾಡುತ್ತಿರುವುದು– ಪಿಟಿಐ ಚಿತ್ರ
ರಾಜ್ಯಸಭೆಯಲ್ಲಿ ಅರುಣ್ ಜೇಟ್ಲಿ ಮಾತನಾಡುತ್ತಿರುವುದು– ಪಿಟಿಐ ಚಿತ್ರ   

ನವದೆಹಲಿ: ‘ಪಾಕಿಸ್ತಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.

ಲೋಕಸಭೆಯಲ್ಲಿ ಮಂಗಳವಾರ ಶೂನ್ಯ ವೇಳೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ಸದಸ್ಯ ಜ್ಯೋತಿರಾದಿತ್ಯ ಸಿಂಧಿಯಾ, ‘ಪ್ರಧಾನಿಯವರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಕುಮಾರ್‌ ಡೊಭಾಲ್ ಹಾಗೂ ಪಾಕಿಸ್ತಾನ ಪ್ರಧಾನಿಯ ಭದ್ರತಾ ಸಲಹೆಗಾರ ನಾಸಿರ್‌ಖಾನ್ ಜಂಜುವಾ ನಡುವೆ ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ಗುಪ್ತಸಭೆ ನಡೆದಿರುವುದರ ಹಿಂದಿನ ಉದ್ದೇಶವೇನು’ ಎಂದು ಪ್ರಶ್ನಿಸಿದರು.

‘ಕುಲಭೂಷಣ್‌ ಜಾಧವ್‌ ಅವರ ಭೇಟಿಗಾಗಿ ಇಸ್ಲಾಮಾಬಾದ್‌ಗೆ ತೆರಳಿದ್ದ ಅವರ ಪತ್ನಿ ಮತ್ತು ತಾಯಿಯನ್ನು ತೀವ್ರವಾಗಿ ಅವಮಾನಿಸಿದ ಘಟನೆ ನಡೆದ ಮಾರನೇ ದಿನ (ಡಿಸೆಂಬರ್‌ 27)ವೇ ಡೊಭಾಲ್‌ ಮತ್ತು ಜಂಜುವಾ ನಡುವೆ ಗುಪ್ತ ಸಭೆ ನಡೆದಿದೆ. ಸಭೆಯ ನಂತರವೂ ನಮ್ಮ ಸೇನಾ ನೆಲೆಗಳ ಮೇಲಿನ ಉಗ್ರರ ದಾಳಿ ಮುಂದುವರಿದಿದೆ. ಇದರಿಂದಾಗಿ ಪಾಕಿಸ್ತಾನ ಕುರಿತು ಕೇಂದ್ರದ ನೀತಿ ಯಾವುದು ಎಂಬುದೇ ಸ್ಪಷ್ಟವಾಗುತ್ತಿಲ್ಲ’ ಎಂದು ಅವರು ದೂರುತ್ತಿದ್ದಂತೆಯೇ, ಆಡಳಿತ ಮತ್ತು ಕಾಂಗ್ರೆಸ್‌ ಸದಸ್ಯರ ನಡುವಿನ ಮಾತಿನ ಚಕಮಕಿ ನಡೆಯಿತು.

ADVERTISEMENT

ಸೇನಾ ಮತ್ತು ಅರೆಸೇನಾ ಪಡೆಗಳ ಸಿಬ್ಬಂದಿ ಮೇಲೆ ಪಾಕಿಸ್ತಾನದ ಉಗ್ರರು ನಡೆಯುತ್ತಿರುವ ದಾಳಿಗಳನ್ನು ತಡೆಯುವಲ್ಲಿ ಮೋದಿ ನೇತೃತ್ವದ ಸರ್ಕಾರ ವಿಫಲವಾಗಿದೆ ಎಂದು ಸಿಂಧಿಯಾ ಗಂಭೀರ ಆರೋಪ ಮಾಡಿದರು.

ಕಳೆದ ಭಾನುವಾರ ಕಾಶ್ಮೀರದ ಪುಲ್ವಾಮಾದಲ್ಲಿನ ಕೇಂದ್ರ ಮೀಸಲು ಪೊಲೀಸ್‌ ಪಡೆಯ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಐವರು ಯೋಧರ ಸಾವಿಗೀಡಾಗಿದ್ದಾರೆ ಎಂದೂ ಅವರು ದೂರಿದರು.

‘ಭದ್ರತಾ ಸಲಹೆಗಾರರ ಗುಪ್ತ ಸಭೆ ನಡೆದಿದೆ’ ಎಂಬ ಆರೋಪವನ್ನು ತಳ್ಳಿಹಾಕದ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್‌ ಅಹಿರ್‌, 2010ರಿಂದ 2013ರವರೆಗಿನ ಮೂರು ವರ್ಷಗಳ ಅವಧಿಯಲ್ಲಿ ಭಾರತೀಯ ಸೇನಾ ಪಡೆಗಳು 471 ಉಗ್ರರನ್ನು ಹೊಡೆದುರುಳಿಸಿದ್ದರೆ, 2014ರಿಂದ ಇದುವರೆಗೆ 580 ಜನ ಉಗ್ರರನ್ನು ಕೊಂದಿವೆ ಎಂದರು.

ಭಯೋತ್ಪಾದಕರ ದಾಳಿಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಭಾರತೀಯ ಸೇನೆ ಕಟ್ಟೆಚ್ಚರದಿಂದ ಕಾರ್ಯ ನಿರ್ವಹಿಸುತ್ತಿದೆ. 2016ರ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನದಲ್ಲಿನ ಉಗ್ರರ ನೆಲೆಗಳ ಮೇಲಿನ ‘ನಿರ್ದಿಷ್ಟ ದಾಳಿ’ಯೇ ಅದಕ್ಕೆ ಉತ್ತಮ ಉದಾಹರಣೆಯಾಗಿದೆ.

ಭಯೋತ್ಪಾದನೆಯನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಹಿಂದಿನ ಸರ್ಕಾರಗಳಿಗಿಂತ ಈಗಿನ ಸರ್ಕಾರ ಹೆಚ್ಚು ಪರಿಣಾಮಕಾರಿ ಕ್ರಮ ಕೈಗೊಂಡಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‌ ವಿವರಿಸಿದರು.

‘ಉರಿ, ಉಧಮ್‌ಪುರ ಮತ್ತು ಪಠಾಣ್‌ಕೋಟ್‌ನಲ್ಲಿರುವ ಸೇನಾ ನೆಲೆಗಳ ಮೇಲೆ ಉಗ್ರರ ದಾಳಿ ನಡೆದಿದ್ದರೂ, ಕೇಂದ್ರ ಸರ್ಕಾರವು ದೇಶದ ಸೂಕ್ಷ್ಮ ಸೇನಾ ನೆಲೆಗಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಂಡಿಲ್ಲ. ದಾಳಿಗಳ ಕುರಿತು ಪರಿಶೀಲನೆ ನಡೆಸಿದ ಸಮಿತಿಯು ಶಿಫಾರಸು ಮಾಡಿದ್ದರೂ ಸೇನಾ ನೆಲೆಗಳಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸದೆ ಕೇಂದ್ರ ಸರ್ಕಾರ ಗಾಢ ನಿದ್ರೆಯಲ್ಲಿದೆ. ಪ್ರಧಾನಿಯವರೂ ಮೌನ ತಾಳಿದ್ದಾರೆ. ಸೇನೆಯಲ್ಲಿ ಕೆಲಸ ಮಾಡುವವರು ಸಾಯಲು ಸಿದ್ಧರಿರಬೇಕು ಎಂದು ಬಿಜೆಪಿ ಸಂಸದ ನೇಪಾಲ್‌ ಸಿಂಗ್‌ ಹೇಳಿಕೆ ನೀಡುತ್ತಾರೆ’ ಎಂದು ಸಿಂಧಿಯಾ ಟೀಕಿಸಿದರು.

‘ಕಳೆದ ಮೂರು ವರ್ಷಗಳ ಅವಧಿಯಲ್ಲಿ ಸಾಕಷ್ಟು ಉಗ್ರರನ್ನು ಸದೆಬಡಿದಿರುವ ಭಾರತೀಯ ಸೈನಿಕರು, ನಿರ್ದಿಷ್ಟ ದಾಳಿಯನ್ನೂ ನಡೆಸಿದ್ದಾರೆ. ವಿರೋಧ ಪಕ್ಷಗಳು ಸಿಆರ್‌ಪಿಎಫ್‌ ಯೋಧರು ಹುತಾತ್ಮರಾದ ವಿಷಯದಲ್ಲಿ ರಾಜಕೀಯ ಮಾಡುವುದು ಬೇಡ’ ಎಂದು ಅನಂತಕುಮಾರ್‌ ಮನವಿ ಮಾಡಿದರು. ಹುತಾತ್ಮರಾದ ಸಿಆರ್‌ಪಿಎಫ್‌ ಯೋಧರಿಗೆ ಸದನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.