ADVERTISEMENT

ಚಳಿ ಎಂದ ಲಾಲುಗೆ ತಬಲಾ ಬಾರಿಸಲು ಹೇಳಿದ ನ್ಯಾಯಮೂರ್ತಿ

ಪಿಟಿಐ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ವಿಚಾರಣೆಗೆ ಹಾಜರಾದ ಲಾಲು ಪ್ರಸಾದ್
ವಿಚಾರಣೆಗೆ ಹಾಜರಾದ ಲಾಲು ಪ್ರಸಾದ್   

ರಾಂಚಿ: ಶಿಕ್ಷೆ ಪ್ರಮಾಣ ಪ್ರಕಟವಾಗುವ ಬಗ್ಗೆ ಆತಂಕ ಪಡದ ಲಾಲು ಪ್ರಸಾದ್, ಜೈಲಿನಲ್ಲಿ ಮೈ ಕೊರೆಯುವ ಚಳಿ ಇದೆ ಎಂದು ನ್ಯಾಯಮೂರ್ತಿ ಬಳಿ ಲಘುಹಾಸ್ಯದ ಧಾಟಿಯಲ್ಲಿ ಹೇಳಿಕೊಂಡರು. ಚಳಿ ಆದರೆ ತಬಲಾ ಬಾರಿಸಿ ಎಂದು ನ್ಯಾಯಮೂರ್ತಿ ಶಿವರಾಜ್‌ ಪಾಲ್‌ ಸಲಹೆ ನೀಡಿದ್ದು ಗುರುವಾರ ನಡೆದ ನ್ಯಾಯಾಲಯ ಕಲಾಪದಲ್ಲಿ ನಗೆ ಉಕ್ಕಿಸಿತು.

ಮೇವು ಹಗರಣದ ಅಪರಾಧಿಗಳಿಗೆ ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ ಎಂಬ ದೃಷ್ಟಿಯಿಂದ ಲಾಲು ಹಾಜರಾಗಿದ್ದರು. ವಿಚಾರಣೆ ವೇಳೆ ಲಾಲು ನಗೆಚಟಾಕಿ ಹಾರಿಸಿದ್ದರು.

ಲಾಲು ಪ್ರಾಮಾಣಿಕವಾಗಿ ವರ್ತಿಸಿಲ್ಲ ಎಂದು ನ್ಯಾಯಮೂರ್ತಿ ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಲಾಲು, ‘ಮೇವು ಹಗರಣದಲ್ಲಿ ನಾನು ಅಮಾಯಕ. ನಾನೂ ವಕೀಲ’ ಎಂದು ಹೇಳಿಕೊಂಡರು.

ADVERTISEMENT

ಲಾಲು ಅವರನ್ನು ನ್ಯಾಯಾಲಯದಿಂದ ಬಿರ್ಸಾ ಮುಂಡಾ ಜೈಲಿಗೆ ಕರೆದೊಯ್ಯುವ ಮುನ್ನ, ‘ಸಮಾಧಾನದಿಂದ ಯೋಚಿಸಿ’ ಎಂದು ನ್ಯಾಯಮೂರ್ತಿಗೇ ಹೇಳಿದರು.

ವಿಚಾರಣೆ ಮುಕ್ತಾಯ: ಐಎಎಸ್‌ ಅಧಿಕಾರಿ ಬೆಕ್ ಜೂಲಿಯಸ್, ರಾಜಕೀಯ ಮುಖಂಡ ಜಗದೀಶ್ ಶರ್ಮಾ, ಮಾಜಿ ಖಜಾನಾಧಿಕಾರಿ ಕೃಷ್ಣಕುಮಾರ್ ಪ್ರಸಾದ್, ಮೇವು ಸಾಗಣೆ, ಸರಬರಾಜು ಮಾಡಿದ ಗೋಪಿನಾಥ್ ದಾಸ್‌ ಮತ್ತು ಜ್ಯೋತಿಕುಮಾರ್ ಝಾ ಅವರ ಶಿಕ್ಷೆ ಪ್ರಮಾಣ ಕುರಿತ ವಿಚಾರಣೆ ಗುರುವಾರ ಮುಕ್ತಾಯವಾಯಿತು.

ಟೀಕಿಸಿದವರಿಗೆ ನೊಟೀಸ್‌: ಡಿಸೆಂಬರ್‌ 23ರಂದು ಮೇವು ಹಗರಣದಲ್ಲಿ ಲಾಲು ಪ್ರಸಾದ್ ತಪ್ಪಿತಸ್ಥ ಎಂದು ನ್ಯಾಯಾಲಯ ಘೋಷಿಸಿದ್ದನ್ನು ಟಿವಿ ವಾಹಿನಿಗಳಲ್ಲಿ ಟೀಕಿಸಿದ್ದ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಮುಖಂಡರಿಗೆ ನ್ಯಾಯಾಲಯ ಬುಧವಾರ ನೊಟೀಸ್‌ ನೀಡಿರುವುದನ್ನು ಪ್ರಕಟಿಸಿದರು. ಈ ನೊಟೀಸ್‌ಗಳನ್ನು ಹಿಂಪಡೆಯಲು ಲಾಲು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.