ADVERTISEMENT

ತಲಾಖ್‌ ವಾಪಸ್‌ ಪಡೆದ ಪತಿ!

​ಪ್ರಜಾವಾಣಿ ವಾರ್ತೆ
Published 4 ಜನವರಿ 2018, 19:30 IST
Last Updated 4 ಜನವರಿ 2018, 19:30 IST
ತಲಾಖ್‌ ವಾಪಸ್‌ ಪಡೆದ ಪತಿ!
ತಲಾಖ್‌ ವಾಪಸ್‌ ಪಡೆದ ಪತಿ!   

ಲಖನೌ: ತ್ರಿವಳಿ ತಲಾಖ್‌ ಮಸೂದೆ ರಾಜ್ಯಸಭೆಯಲ್ಲಿ ಇನ್ನೂ ಅಂಗೀಕಾರವಾಗದೇ ಇರಬಹುದು. ಆದರೆ, ಮೂರು ವರ್ಷ ಜೈಲು ಶಿಕ್ಷೆಗೆ ಕಾರಣವಾಗುವ ಪ್ರಸ್ತಾವಿತ ಕಾನೂನು ಮುಸ್ಲಿಂ ಸಮುದಾಯದ ಕೆಲವು ವಿವಾಹಿತ ಪುರುಷರಲ್ಲಿ ಭಯ ಹುಟ್ಟಿಸಿರುವಂತಿದೆ ಕಾಣುತ್ತಿದೆ.

ಅಂತಹ ಒಂದು ಪ್ರಕರಣ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ ನಡೆದಿದೆ. ಒಂದೇ ಉಸಿರಿಗೆ ಮೂರು ಬಾರಿ ತಲಾಖ್‌ ಹೇಳಿ ಪತ್ನಿಗೆ ವಿಚ್ಛೇದನ ನೀಡಿದ್ದ ವ್ಯಕ್ತಿಯೊಬ್ಬರು ಆಕೆಯನ್ನು ಮರಳಿ ಸ್ವೀಕರಿಸಿದ್ದಾರೆ. ಇದಕ್ಕೆ ಕಾರಣ ಪತ್ನಿ ಪೊಲೀಸರಿಗೆ ದೂರು ನೀಡಿದ್ದು!

ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಪತಿಯನ್ನು ಕರೆದು ಪ್ರಸ್ತಾವಿತ ಕಾನೂನಿನಲ್ಲಿರುವ ಜೈಲು ಶಿಕ್ಷೆಯ ಪ್ರಮಾಣದ ಬಗ್ಗೆ ಮಾಹಿತಿ ನೀಡಿದಾಗ ತಲಾಖ್‌ ಅನ್ನು ವಾಪಸ್‌ ಪಡೆದು ಮಡದಿಯನ್ನು ಸ್ವೀಕರಿಸಲು ಅವರು ಒಪ್ಪಿಕೊಂಡಿದ್ದಾರೆ.

ADVERTISEMENT

ಘಟನೆ ವಿವರ: ಬಸ್ತಿ ಜಿಲ್ಲೆಯ ಖುರ್ಷಿದ್‌ ಆಲಂ ಎಂಬುವವರು ಗೊಂಡಾ ನಿವಾಸಿ ಶಬ್ನಮ್‌ ಅವರನ್ನು ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು.

ಕೌಟುಂಬಿಕ ವಿಚಾರಕ್ಕಾಗಿ ವಾರದ ಹಿಂದೆ ದಂಪತಿ ಜಗಳವಾಡಿದ್ದರು. ಶಬ್ನಮ್‌ ಮೇಲೆ ಹಲ್ಲೆ ನಡೆಸಿದ್ದ ಖುರ್ಷಿದ್‌, ಅವರನ್ನು ಪೋಷಕರ ಮನೆಗೆ ಕಳುಹಿಸಿದ್ದರು.

ಎರಡು ದಿನಗಳ ಹಿಂದೆ ಪತ್ನಿಯ ತವರು ಮನೆಗೆ ಹೋಗಿದ್ದ ಖುರ್ಷಿದ್‌ ಒಂದೇ ಬಾರಿಗೆ ಮೂರು ಬಾರಿ ತಲಾಖ್‌ ಹೇಳಿ ವಿಚ್ಛೇದನ ನೀಡಿದ್ದರು.

ಆಘಾತಗೊಂಡ ಶಬ್ನಮ್‌ ಠಾಣೆಗೆ ತೆರಳಿ ಪತಿ ವಿರುದ್ಧ ದೂರು ನೀಡಿದ್ದರು. ಖುರ್ಷಿದ್‌ ಅವರನ್ನು ಕರೆಸಿಕೊಂಡಿದ್ದ ಪೊಲೀಸರು ಪ್ರಸ್ತಾವಿತ ಕಾನೂನಿನ ಬಗ್ಗೆ ವಿವರಿಸಿದ್ದರು. ನಂತರ ಪತ್ನಿಯನ್ನು ಸ್ವೀಕರಿಸಲು ಒಪ್ಪಿಕೊಂಡ ಖುರ್ಷಿದ್‌, ಇದಕ್ಕೆ ಲಿಖಿತವಾಗಿ ಸಮ್ಮತಿ ಸೂಚಿಸಿದರು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.