ADVERTISEMENT

ಪ್ರಚೋದನಕಾರಿ ಭಾಷಣ: ಮೆವಾನಿ, ಖಾಲಿದ್‌ ವಿರುದ್ಧ ಪ್ರಕರಣ

‘ಎಲ್ಗರ್‌ ಪರಿಷತ್‌’ ಕಾರ್ಯಕ್ರಮದಲ್ಲಿ ಗಲಭೆಗೆ ಪ್ರಚೋದನೆ ಆರೋಪ

ಪಿಟಿಐ
Published 4 ಜನವರಿ 2018, 19:37 IST
Last Updated 4 ಜನವರಿ 2018, 19:37 IST
ಜಿಗ್ನೇಶ್‌ ಮೆವಾನಿ, ಉಮರ್‌ ಖಾಲಿದ್‌
ಜಿಗ್ನೇಶ್‌ ಮೆವಾನಿ, ಉಮರ್‌ ಖಾಲಿದ್‌   

ಪುಣೆ: ‘ಪ್ರಚೋದನಕಾರಿ’ ಭಾಷಣ ಮಾಡಿದ ಆರೋಪದಲ್ಲಿ ದಲಿತ ಮುಖಂಡ ಜಿಗ್ನೇಶ್‌ ಮೆವಾನಿ ಮತ್ತು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿ ಉಮರ್‌ ಖಾಲಿದ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಭೀಮಾ–ಕೋರೆಗಾಂವ್‌ ಸಮರದ 200ನೇ ವಾರ್ಷಿಕೋತ್ಸವದ ಪ್ರಯುಕ್ತ ಪುಣೆಯ ಶನಿವಾರ್‌ವಾಡಾದಲ್ಲಿ ಕಳೆದ ಡಿ. 31ರಂದು ಏರ್ಪಡಿಸಿದ್ದ ‘ಎಲ್ಗರ್‌ ಪರಿಷತ್‌’ ಕಾರ್ಯಕ್ರಮದಲ್ಲಿ ಗುಜರಾತ್‌ ಶಾಸಕ ಮೆವಾನಿ ಮತ್ತು ಖಾಲಿದ್‌ ಭಾಗವಹಿಸಿದ್ದರು. ಭಾಷಣ ಮಾಡುವಾಗ ಇವರು ಮರಾಠ ಮತ್ತು ದಲಿತ ಸಮುದಾಯಗಳ ನಡುವೆ ದ್ವೇಷ ಮತ್ತು ಬಿರುಕು ಉಂಟಾಗಲು ಕುಮ್ಮಕ್ಕು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಭೀಮಾ–ಕೋರೆಗಾಂವ್‌ನಲ್ಲಿ ಇದೇ ಒಂದರಂದು ನಡೆದ ಹಿಂಸೆಗೆ ಈ ಇಬ್ಬರ ಭಾಷಣವೇ ಕಾರಣ ಎಂದು ಪುಣೆ ನಿವಾಸಿ ಅಕ್ಷಯ್‌ ಬಿಕ್ಕದ್‌ ಎಂಬವರು ದೂರು ನೀಡಿದ್ದಾರೆ.

ADVERTISEMENT

‘ಹೊಸ ಪೇಶ್ವೆಗಳನ್ನು ಗೆಲ್ಲಬೇಕಿದ್ದರೆ ಭೀಮಾ–ಕೋರೆಗಾಂವ್‌ ಯುದ್ಧವನ್ನು ನಾವು ಮುಂದುವರಿಸಬೇಕಿದೆ’ ಎಂದು ಮೆವಾನಿ ಹೇಳಿದ್ದಾರೆ ಎಂದು ದೂರಿನಲ್ಲಿ ಬಿಕ್ಕದ್‌ ಆರೋಪಿಸಿದ್ದಾರೆ.

ಯುದ್ಧ ನಡೆಸುತ್ತಿರುವ ಜನರು ವಿಧಾನಸಭೆಗಳು ಮತ್ತು ಸಂಸತ್ತಿನಲ್ಲಿ ಇರಬೇಕಾದ ಅಗತ್ಯ ಇದೆ. ಆದರೆ ಜಾತೀಯತೆಯನ್ನು ನಿರ್ಮೂಲನೆ ಮಾಡಬೇಕಿದ್ದರೆ ಬೀದಿಗಿಳಿಯಲೇಬೇಕು ಎಂದು ಮೆವಾನಿ ಹೇಳಿದ್ದಾರೆ ಎಂದೂ ಆಪಾದಿಸಲಾಗಿದೆ.

‘ಇದು ಪ್ರತೀಕಾರದ ಸಮಯ. ಈ ಯುದ್ಧದಲ್ಲಿ ನಾವು ಗೆಲ್ಲಬೇಕು ಮತ್ತು ಹೊಸ ಪೇಶ್ವೆಗಳ ವಿರುದ್ಧದ ಈ ಗೆಲುವು ಭೀಮಾ–ಕೋರೆಗಾಂವ್‌ ಸಮರದ ಹುತಾತ್ಮರಿಗೆ ನಾವು ನೀಡುವ ನಿಜವಾದ ಶ್ರದ್ಧಾಂಜಲಿ’ ಎಂದು ಉಮರ್‌ ಹೇಳಿದ್ದಾಗಿ ಆರೋಪಿಸಲಾಗಿದೆ.

ಭೀಮಾ–ಕೋರೆಗಾಂವ್‌ ಸಮರದ ಎರಡನೇ ಶತಮಾನೋತ್ಸವ ಆಚರಣೆ ಸಂದರ್ಭದಲ್ಲಿ ಇದೇ ಒಂದರಂದು ಪುಣೆಯಲ್ಲಿ ಹಿಂಸಾಚಾರ ನಡೆದಿತ್ತು. ಭೀಮಾ–ಕೋರೆಗಾಂವ್‌ ಯುದ್ಧದಲ್ಲಿ ಬ್ರಿಟಿಷರು ಪೇಶ್ವೆಗಳನ್ನು ಸೋಲಿಸಿದ್ದರು. ಬ್ರಿಟಿಷರ ಸೇನೆಯಲ್ಲಿ ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಈ ಗೆಲುವು ದಲಿತ ಸ್ವಾಭಿಮಾನದ ಸಂಕೇತ ಎಂದು ದಲಿತ ಸಮುದಾಯ ಪರಿಗಣಿಸುತ್ತಿದೆ.

ಅನುಮತಿ ನಕಾರ: ನಡೆಯದ ಕಾರ್ಯಕ್ರಮ
ಮುಂಬೈ:
ದಲಿತ ನಾಯಕ ಜಿಗ್ನೇಶ್‌ ಮೆವಾನಿ ಮತ್ತು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕ ಉಮರ್‌ ಖಾಲಿದ್‌ ಭಾಗವಹಿಸಬೇಕಿದ್ದ ಕಾರ್ಯಕ್ರಮವೊಂದಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಈ ಕಾರ್ಯಕ್ರಮ ನಡೆಯಬೇಕಿದ್ದ ಭಾಯಿದಾಸ್‌ ಸಭಾಂಗಣದ ಹೊರಗೆ ಸೇರಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕಾರ್ಯಕ್ರಮ ಸಂಘಟಿಸಿದ್ದ ಛತ್ರ ಭಾರತಿ ಸಂಘಟನೆಯ ಅಧ್ಯಕ್ಷ ದತ್ತಾ ದಾಘೆ, ಇತರ ಸಂಘಟಕರಾದ ಕಪಿಲ್‌ ಪಾಟೀಲ್‌, ಅಲಹಾಬಾದ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ನಾಯಕಿ ರಿಚಾ ಸಿಂಗ್‌, ಜೆಎನ್‌ಯು ವಿದ್ಯಾರ್ಥಿ ನಾಯಕ ಪ್ರದೀಪ್‌ ನರ್ವಾಲ್‌ ಅವರು ಪೊಲೀಸರು ವಶಕ್ಕೆ ಪಡೆದವರಲ್ಲಿ ಸೇರಿದ್ದಾರೆ.

‘ಇದು ನಿರಂಕುಶಾಧಿಪತ್ಯ. ಇದರ ವಿರುದ್ಧ ನಮ್ಮ ಹೋರಾಟವನ್ನು ಸಂಸತ್ತಿನ ವರೆಗೆ ಒಯ್ಯುತ್ತೇವೆ’ ಎಂದು ಪೊಲೀಸ್‌ ವಶದಲ್ಲಿದ್ದ ರಿಚಾ ಸಿಂಗ್‌ ಹೇಳಿದ್ದಾರೆ.

‘ಅಖಿಲ ಭಾರತ ವಿದ್ಯಾರ್ಥಿ ಶೃಂಗ ಸಭೆ 2018’ ಗುರುವಾರ ನಡೆಯಬೇಕಿತ್ತು. ಅದರಲ್ಲಿ ಮೆವಾನಿ ಮತ್ತು ಖಾಲಿದ್‌ ಭಾಗವಹಿಸಬೇಕಿತ್ತು. ಭೀಮಾ–ಕೋರೆಗಾಂವ್‌ ಯುದ್ಧದ 200ನೇ ವರ್ಷಾಚರಣೆ ಸಂದರ್ಭದಲ್ಲಿ ನಡೆದ ಗಲಭೆ ಮತ್ತು ಅದನ್ನು ಖಂಡಿಸಿ ಬುಧವಾರ ನಡೆಸಲಾದ ಬಂದ್‌ ವೇಳೆ ನಡೆದ ಹಿಂಸಾಚಾರದ ಕಾರಣಕ್ಕೆ ಅನುಮತಿ ನಿರಾಕರಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರು ವಶಕ್ಕೆ ಪಡೆಯುವ ಮೊದಲು ಮಾತನಾಡಿದ್ದ ದಾಘೆ, ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನೀಡಿಲ್ಲ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.