ADVERTISEMENT

ಸೌದಿ, ಯುಎಇನಲ್ಲಿ ವ್ಯಾಟ್‌ ಭಾರತೀಯರಿಗೆ ಧಕ್ಕೆ

ಪಿಟಿಐ
Published 4 ಜನವರಿ 2018, 19:40 IST
Last Updated 4 ಜನವರಿ 2018, 19:40 IST
ಸೌದಿ, ಯುಎಇನಲ್ಲಿ ವ್ಯಾಟ್‌ ಭಾರತೀಯರಿಗೆ ಧಕ್ಕೆ
ಸೌದಿ, ಯುಎಇನಲ್ಲಿ ವ್ಯಾಟ್‌ ಭಾರತೀಯರಿಗೆ ಧಕ್ಕೆ   

ಹೈದರಾಬಾದ್‌: ’ಸೌದಿ ಅರೇಬಿಯಾ ಮತ್ತು ಯುನೈಟೆಡ್‌ ಅರಬ್‌ ಎಮಿರೆಟ್ಸ್‌ನಲ್ಲಿ(ಯುಎಇ) ವ್ಯಾಟ್‌ ವ್ಯವಸ್ಥೆ ಜಾರಿಗೊಳಿಸಿರುವುದರಿಂದ ಈ ರಾಷ್ಟ್ರಗಳಲ್ಲಿ ಕೆಲಸ ಮಾಡುವ ಭಾರತೀಯರ ಹಿತಾಸಕ್ತಿಗೆ ಧಕ್ಕೆಯಾಗಲಿದೆ’ ಎಂದು ಮಾಜಿ ರಾಯಭಾರಿ ತಲ್ಮಿಜ್‌ ಅಹ್ಮದ್‌ ಅಭಿಪ್ರಾಯಪಟ್ಟಿದ್ದಾರೆ.

‘ಈ ರಾಷ್ಟ್ರಗಳು ಜನವರಿ1ರಿಂದ ವ್ಯಾಟ್‌ ಜಾರಿಗೊಳಿಸಿವೆ. ಹೊಸ ವ್ಯವಸ್ಥೆ ಭಾರತೀಯರಿಗೆ ಅನುಕೂಲವಾಗಿಲ್ಲ’ ಎಂದು ಅವರು ತಿಳಿಸಿದ್ದಾರೆ.

‘ಸೌದಿ ಅರೇಬಿಯಾದಲ್ಲಿ 30 ಲಕ್ಷ ಮತ್ತು ಯುಎಇನಲ್ಲಿ 28 ಲಕ್ಷ ಭಾರತೀಯರಿದ್ದಾರೆ. ಇವರಲ್ಲಿ ಕೆಳ ಮಧ್ಯಮ ವರ್ಗದವರು ಮತ್ತು ಮಧ್ಯಮ ವರ್ಗದವರ ಮೇಲೆಯೇ ಹೆಚ್ಚು ಪರಿಣಾಮ ಬೀರಲಿದೆ. ಈಗಾಗಲೇ ದುಬಾರಿ ಜೀವನ ವೆಚ್ಚದಿಂದ ಈ ವರ್ಗದ ಜನರು ತತ್ತರಿಸಿದ್ದಾರೆ. ಈಗ ವ್ಯಾಟ್‌ನಿಂದ ಮತ್ತಷ್ಟು ಹೊರೆಯಾಗಲಿದೆ’ ಎಂದು ತಿಳಿಸಿದ್ದಾರೆ.

ADVERTISEMENT

‘ಈ ರಾಷ್ಟ್ರಗಳಲ್ಲಿ ಮನೆ ಬಾಡಿಗೆ, ವೈದ್ಯಕೀಯ ವೆಚ್ಚ, ಶಾಲಾ ಶುಲ್ಕ, ಸಾರಿಗೆ ಮತ್ತು ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗಿದೆ. ಹೀಗಾಗಿ, ಕಳೆದ ಎರಡು ವರ್ಷಗಳಲ್ಲಿ ಜೀವನ ವೆಚ್ಚವೂ ಹೆಚ್ಚಾಗಿದೆ’ ಎಂದರು.

‘ಕಾರ್ಮಿಕ ಸಮುದಾಯದವರಿಗೆ ವಸತಿ ವ್ಯವಸ್ಥೆಯನ್ನು ಉದ್ಯೋಗದಾತರು ಕಲ್ಪಿಸುತ್ತಾರೆ. ಉನ್ನತ ಹುದ್ದೆಯಲ್ಲಿರುವವರಿಗೆ ಕಂಪನಿಗಳು ಹೆಚ್ಚಿನ ವೇತನ ನೀಡಿ ಉದ್ಯೋಗ ಭದ್ರತೆ ಒದಗಿಸುತ್ತವೆ. ಹೀಗಾಗಿ, ಈ ವರ್ಗದವರ ಮೇಲೆ ವ್ಯಾಟ್‌ ಕಡಿಮೆ ಪರಿಣಾಮ ಬೀರುತ್ತದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.