ADVERTISEMENT

ಚಳಿಗಾಲದ ಅಧಿವೇಶನ ಮುಕ್ತಾಯ : 12 ಮಸೂದೆ ಅಂಗೀಕಾರ

ಪಿಟಿಐ
Published 5 ಜನವರಿ 2018, 12:25 IST
Last Updated 5 ಜನವರಿ 2018, 12:25 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಮುಸ್ಲಿಂ ಮಹಿಳೆಯರ(ಮದುವೆ ಹಕ್ಕುಗಳ ರಕ್ಷಣೆ) ಮಸೂದೆ 2017 (ತ್ರಿವಳಿ ತಲಾಖ್‌ ನಿಷೇಧ ಮಸೂದೆ) ಸೇರಿದಂತೆ 12 ಮಸೂದೆಗಳನ್ನು ಅಂಗೀಕರಿಸುವುದರೊಂದಿಗೆ ಲೋಕಸಭೆಯ ಚಳಿಗಾಲದ ಅಧಿವೇಶನ ಶುಕ್ರವಾರ ಮುಕ್ತಾಯಗೊಂಡಿತು.

ಅಧಿವೇಶನವನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡುತ್ತ ಸಭಾಧ್ಯಕ್ಷೆ ಸುಮಿತ್ರಾ ಮಹಜನ್‌ ಮಾತನಾಡಿ, ‘ಈ  ಅಧಿವೇಶನದಲ್ಲಿ 61 ಗಂಟೆ 48 ನಿಮಿಷಗಳ ಕಾಲ ಕಲಾಪ ನಡೆಯಿತು. ಅದರಲ್ಲಿ 15 ಗಂಟೆಗಳ ಅವಧಿ ಗದ್ದಲ ಮತ್ತು ಕಲಾಪ ಮುಂದೂಡಿಕೆಯಿಂದಾಗಿ ವ್ಯರ್ಥವಾಯಿತು. 16 ಮಸೂದೆಗಳನ್ನು ಸದನದಲ್ಲಿ ಮಂಡಿಸಲಾಯಿತು’ ಎಂದರು.

ಈ ಬಾರಿಯ ಅಧಿವೇಶನದಲ್ಲಿ ಕೇಂದ್ರಿಯ ರಸ್ತೆ ನಿಧಿ(ತಿದ್ದುಪಡಿ) ಮಸೂದೆ, ಸರಕು ಮತ್ತು ಸೇವಾ ತೆರಿಗೆ(ರಾಜ್ಯಗಳಿಗೆ ತೆರಿಗೆ ಪರಿಹಾರ) ತಿದ್ದುಪಡಿ ಮಸೂದೆ, ಹೈಕೋರ್ಟ್‌ ಮತ್ತು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳ ಸಂಬಳ ಹೆಚ್ಚಳದ ಮಸೂದೆಗಳು ಅಂಗೀಕಾರಗೊಂಡವು.

ADVERTISEMENT

‘ಕಲಾಪದ ವೇಳೆ 280  ಮುಖ್ಯ ಪ್ರಶ್ನೆಗಳನ್ನು ಕೇಳಲಾಯಿತು. ಅದರಲ್ಲಿ 45 ಪ್ರಶ್ನೆಗಳಿಗೆ ಮೌಖಿಕವಾಗಿ ಉತ್ತರಿಸಲಾಯಿತು. ಉಳಿದ ಮುಖ್ಯ ಪ್ರಶ್ನೆಗಳು ಸೇರಿದಂತೆ 3,330 ಮುಖ್ಯ ಅಲ್ಲದ ಪ್ರಶ್ನೆಗಳನ್ನು ಸದನದ ಮುಂದಿಡಲಾಗಿದೆ’ ಎಂದರು.

‘ಇದೇ ವೇಳೆಯಲ್ಲಿ ಸ್ಥಾಯಿ ಸಮಿತಿ 41 ವರದಿಗಳನ್ನು ಸದನಕ್ಕೆ ಸಲ್ಲಿಸಿವೆ. ಹಾಗೆಯೇ 98 ಖಾಸಗಿ ಮಸೂದೆಗಳನ್ನು ಪರಿಚಯಿಸಲು ಅವಕಾಶ ಮಾಡಿಕೊಡಲಾಯಿತು’ ಎಂದು ಸಭಾಧ್ಯಕ್ಷರು ಸದನಕ್ಕೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.