ADVERTISEMENT

ಕಡಿಮೆ ಶಿಕ್ಷೆ ವಿಧಿಸಲು ಲಾಲು ಮನವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2018, 19:30 IST
Last Updated 5 ಜನವರಿ 2018, 19:30 IST

ಪಟ್ನಾ: ಮೇವು ಹಗರಣದ ತಪ್ಪಿತಸ್ಥರ ವಿಚಾರಣೆಯನ್ನು ಶುಕ್ರವಾರ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಶಿವಪಾಲ್‌ ಸಿಂಗ್‌, ಶಿಕ್ಷೆ ಪ್ರಮಾಣ ಪ್ರಕಟಿಸುವುದನ್ನು ಮುಂದೂಡಿದ್ದಾರೆ. ಶನಿವಾರ ಶಿಕ್ಷೆ ಪ್ರಮಾಣ ಪ್ರಕಟವಾಗುವ ಸಾಧ್ಯತೆ ಇದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಪರ ವಕೀಲರ ವಾದ ಆಲಿಸಿದರು. ಆದರೆ, ಲಾಲು ಅವರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಲಿಲ್ಲ. ಶುಕ್ರವಾರ ಐವರು ತಪ್ಪಿತಸ್ಥರ ವಿಚಾರಣೆ ಪೂರ್ಣಗೊಳಿಸಿದರು.

ಗುರುವಾರ ಐವರ ವಿಚಾರಣೆ ಪೂರ್ಣಗೊಂಡಿತ್ತು. ಒಟ್ಟು 16 ತಪ್ಪಿತಸ್ಥರ ಪೈಕಿ ಇನ್ನೂ ಆರು ಮಂದಿಯ ವಿಚಾರಣೆ ಬಾಕಿ ಇದ್ದು, ಶನಿವಾರ ಪೂರ್ಣಗೊಳಿಸುವುದಾಗಿ ನ್ಯಾಯಾಧೀಶರು ತಿಳಿಸಿದರು.

ADVERTISEMENT

‘2014ರಲ್ಲಿ ಲಾಲು ಅವರಿಗೆ ಹೃದಯ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಮೇವು ಹಗರಣಕ್ಕೆ ಸಂಬಂಧಿಸಿದಂತೆ 21 ವರ್ಷಗಳಿಂದ ವಿಚಾರಣೆ ಎದುರಿಸುತ್ತಿದ್ದಾರೆ. ಹಲವು ಬಾರಿ ಜೈಲಿನಲ್ಲಿದ್ದರು. ಹಾಗಾಗಿ ಅವರ ಬಗ್ಗೆ ಔದಾರ್ಯ ತೋರಿ, ಕಡಿಮೆ ಶಿಕ್ಷೆ ವಿಧಿಸಬೇಕು’ ಎಂದು ಲಾಲು ಪರ ವಕೀಲರು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ವಕೀಲರು, ಲಾಲು ಪ್ರಸಾದ್‌ ಅವರ ಆರೋಗ್ಯ ಉತ್ತಮವಾಗಿದ್ದು, ಈಚೆಗೆ ರಾಜಕೀಯ ರ‍್ಯಾಲಿಗಳಲ್ಲಿ ಭಾಗವಹಿಸಿದ್ದರು. ಅವರಿಗೆ ಗರಿಷ್ಠ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.