ADVERTISEMENT

₹500ಕ್ಕೆ ಆಧಾರ್‌ ಮಾಹಿತಿ ಮಾರಾಟ ಕುರಿತು ತನಿಖಾ ವರದಿ ಪ್ರಕಟಿಸಿದ್ದ ಪತ್ರಿಕೆ, ವರದಿಗಾರ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಯುಐಡಿಎಐ

ಏಜೆನ್ಸೀಸ್
Published 7 ಜನವರಿ 2018, 6:39 IST
Last Updated 7 ಜನವರಿ 2018, 6:39 IST
₹500ಕ್ಕೆ ಆಧಾರ್‌ ಮಾಹಿತಿ ಮಾರಾಟ ಕುರಿತು ತನಿಖಾ ವರದಿ ಪ್ರಕಟಿಸಿದ್ದ ಪತ್ರಿಕೆ, ವರದಿಗಾರ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಯುಐಡಿಎಐ
₹500ಕ್ಕೆ ಆಧಾರ್‌ ಮಾಹಿತಿ ಮಾರಾಟ ಕುರಿತು ತನಿಖಾ ವರದಿ ಪ್ರಕಟಿಸಿದ್ದ ಪತ್ರಿಕೆ, ವರದಿಗಾರ್ತಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಯುಐಡಿಎಐ   

ನವದೆಹಲಿ: ₹500ಕ್ಕೆ ದೇಶದ ನಾಗರಿಕರ ಆಧಾರ್‌ ಮಾಹಿತಿ ವಾಟ್ಸ್‌ಆ್ಯಪ್‌ನಲ್ಲಿ ಮಾರಾಟವಾಗುತ್ತಿರುವ ಕುರಿತು ತನಿಖಾ ವರದಿ ಪ್ರಕಟಿಸಿದ್ದ ದಿ ಟ್ರಿಬ್ಯೂನ್‌ ಪತ್ರಿಕೆ ಹಾಗೂ ವರದಿಗಾರ್ತಿ ವಿರುದ್ಧ ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ(ಯುಐಡಿಎಐ) ಎಫ್‌ಐಆರ್‌ ದಾಖಲಿಸಿದೆ.

ರಚನಾ ಖೈರಾ ಆರು ತಿಂಗಳು ತನಿಖೆ ನಡೆಸಿ, ದೇಶದ ನೂರು ಕೋಟಿ ಭಾರತೀಯರ ಆಧಾರ್‌ ಮಾಹಿತಿ ಸೋರಿಕೆಯಾಗಿರುವ ಕುರಿತು ಇತ್ತೀಚೆಗೆ ವರದಿ ಪ್ರಕಟಿಸಿದ್ದರು. ನಿಯಮ ಉಲ್ಲಂಘನೆ ಆರೋಪದ ಮೇಲೆ ಯುಐಡಿಎಐ ಉಪನಿರ್ದೇಶಕರು ಟ್ರಿಬ್ಯೂನ್‌ ಪತ್ರಿಕೆ ಹಾಗೂ ರಚನಾ ವಿರುದ್ಧ ಎಫ್‌ಐಆರ್‌ ದಾಖಲಿಸಿದೆ.

ತನಿಖೆ ಸಂದರ್ಭದಲ್ಲಿ ರಚನಾ ಸಂಪರ್ಕ ಹೊಂದಿರುವುದಾಗಿ ಪ್ರಕಟಿಸಿದ್ದ ಅನಿಲ್‌ ಕುಮಾರ್‌, ಸುನಿಲ್‌ ಕುಮಾರ್‌ ಹಾಗೂ ರಾಜ್‌ ಹೆಸರುಗಳೂ ಎಫ್‌ಐಆರ್‌ನಲ್ಲಿ ದಾಖಲಾಗಿರುವುದಾಗಿ ದಿ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ADVERTISEMENT

ಜಂಟಿ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಎಫ್‌ಐಆರ್‌ ಕುರಿತು ಸ್ಪಷ್ಟಪಡಿಸಿದ್ದು, ತನಿಖೆ ಪ್ರಾರಂಭಿಸಿರುವುದಾಗಿ ತಿಳಿಸಿದ್ದಾರೆ. ಅಪರಾಧ ವಿಭಾಗದ ಸೈಬರ್‌ ಘಟಕದಲ್ಲಿ ಐಪಿಸಿ ಸೆಕ್ಷನ್‌ 419(ವಂಚನೆಗೆ ಸಹಕಾರ), 420(ಮೋಸ), 468(ಸುಳ್ಳು ಸೃಷ್ಟಿ), ಐಟಿ ಕಾಯ್ದೆ 66, ಆಧಾರ್‌ ಕಾಯ್ದೆ ಸೆಕ್ಷನ್ 36/37 ಸೇರಿ ಇತರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ.

ಈ ಸಂಬಂಧ ದಿ ಟ್ರಿಬ್ಯೂನ್‌ ಪತ್ರಿಕೆಯ ಸಂಪಾದಕ ಹರೀಶ್‌ ಖರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ವರದಿಯಾಗಿದೆ.

ತನಿಖಾ ವರದಿ:
ದಿ ಟ್ರಿಬ್ಯೂನ್‌ನ ತನಿಖಾ ವರದಿಗಾರ್ತಿ ವಾಟ್ಸ್‌ಆ್ಯಪ್‌ ಮೂಲಕ ಅನಾಮಿಕ ಮಾರಾಟಗಾರನಿಂದ ಆಧಾರ್ ಮಾಹಿತಿ ಹೊಂದಿರುವ ಪೋರ್ಟಲ್‌ನ ಲಾಗಿನ್‌ ಐಡಿ ಹಾಗೂ ಪಾಸ್‌ವರ್ಡ್‌ ಪಡೆದಿದ್ದಾರೆ. ಪೇಟಿಎಂ ಮೂಲಕ ₹500 ಪಾವತಿಯಾಗಿ ಕೆಲವೇ ಕ್ಷಣಗಳಲ್ಲಿ ಮಾರಾಟಗಾರ ಆಧಾರ್‌ ಮಾಹಿತಿ ಉಪಯೋಗಿಸಲು ಅಗತ್ಯವಾದ ಲಿಂಕ್‌ ರವಾನಿಸಿದ್ದಾನೆ. ಆ ಪೋರ್ಟಲ್‌ನಲ್ಲಿ ಯಾವುದೇ ಆಧಾರ್‌ ಸಂಖ್ಯೆ ಟೈಪಿಸಿ ವ್ಯಕ್ತಿಯ ಹೆಸರು, ವಿಳಾಸ, ಮೊಬೈಲ್‌ ಸಂಖ್ಯೆ, ಫೋಟೊ ಸೇರಿ ಸಂಪೂರ್ಣ ಮಾಹಿತಿ ಪಡೆಯಬಹುದಾಗಿತ್ತು. ಹೆಚ್ಚುವರಿಯಾಗಿ ₹300 ಪಾವತಿಸಿದ ಬಳಿಕ ಆಧಾರ್‌ ಕಾರ್ಡ್‌ ಪ್ರಿಂಟ್‌ ಪಡೆಯುವ ವ್ಯವಸ್ಥೆಯನ್ನೂ ಒದಗಿಸಿದ್ದರು ಎಂದು ವರದಿಯಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ್ದ ಯುಐಡಿಎಐ, ಆಧಾರ್‌ ಮಾಹಿತಿ ಸಂಪೂರ್ಣ ಸುರಕ್ಷಿತವಾಗಿದೆ ಎಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.