ADVERTISEMENT

ಗಣರಾಜ್ಯೋತ್ಸವದಂದು ಕೇರಳದಲ್ಲಿ ಭಾಗವತ್‌ ಧ್ವಜಾರೋಹಣ

ಪಿಟಿಐ
Published 7 ಜನವರಿ 2018, 19:30 IST
Last Updated 7 ಜನವರಿ 2018, 19:30 IST
ಮೋಹನ ಭಾಗವತ್‌
ಮೋಹನ ಭಾಗವತ್‌   

ನವದೆಹಲಿ: ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ ಭಾಗವತ್‌ ಕೇರಳದ ಪಾಲಕ್ಕಾಡ್‌ ಪಟ್ಟಣದ ಹೊರವಲಯದ ಶಾಲೆಯೊಂದರಲ್ಲಿ ಗಣರಾಜ್ಯೋತ್ಸವ ದಿನದಂದು ರಾಷ್ಟ್ರಧ್ವಜಾರೋಹಣ ಮಾಡಲಿದ್ದಾರೆ. ಎಡರಂಗದ ಸರ್ಕಾರ ಇರುವ ಕೇರಳದಲ್ಲಿ ಕಳೆದ ಸ್ವಾತಂತ್ರ್ಯೋತ್ಸವ ದಿನದಂದು ಭಾಗವತ್‌ ಧ್ವಜಾರೋಹಣ ಮಾಡಿದ್ದು ಆರ್‌ಎಸ್‌ಎಸ್‌ ಮತ್ತು ಎಡಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿತ್ತು.

ಇದೇ 26ರಿಂದ ಪಾಲಕ್ಕಾಡ್‌ ಹೊರವಲಯದ ಶಾಲೆಯೊಂದರ ಸಮೀಪ ಆರ್‌ಎಸ್‌ಎಸ್‌ನ ಮೂರು ದಿನಗಳ ಶಿಬಿರ ನಡೆಯಲಿದೆ. ಈ ಶಿಬಿರದಲ್ಲಿ ಭಾಗವತ್‌ ಭಾಗವಹಿಸಲಿದ್ದಾರೆ.

‘ಸ್ವಾತಂತ್ರ್ಯ ಮತ್ತು ಗಣರಾಜ್ಯೋತ್ಸವ ದಿನದಂದು ಆರ್‌ಎಸ್‌ಎಸ್‌ ಮುಖ್ಯಸ್ಥರು ಎಲ್ಲಿ ಇರುತ್ತಾರೋ ಅಲ್ಲಿಯೇ ಧ್ವಜಾರೋಹಣ ಮಾಡುತ್ತಾರೆ. ಇದೇ 26ರಂದು ಭಾಗವತ್‌ ಕೇರಳದಲ್ಲಿರುತ್ತಾರೆ. ಹಾಗಾಗಿ ಅವರು ಅಲ್ಲಿಯೇ ಧ್ವಜಾರೋಹಣ ಮಾಡಲಿದ್ದಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಿಲ್ಲ’ ಎಂದು ಆರ್‌ಎಸ್‌ಎಸ್‌ನ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.

ADVERTISEMENT

ಆರ್‌ಎಸ್‌ಎಸ್‌ ಕಾರ್ಯಕ್ರಮ ನಡೆಯುವ ಶಾಲೆಯು ಆರ್‌ಎಸ್‌ಎಸ್‌ನ ಭಾರತೀಯ ವಿದ್ಯಾ ನಿಕೇತನ ಸಂಸ್ಥೆಯ ಅಧೀನದಲ್ಲಿದೆ. ಆರ್‌ಎಸ್‌ಎಸ್‌ ರಾಷ್ಟ್ರೀಯವಾದಿ ಸಂಘಟನೆ ಆಗಿರುವುದರಿಂದ ರಾಷ್ಟ್ರೀಯ ಮಹತ್ವದ ದಿನಗಳನ್ನು ಆಚರಿಸುವುದು ಸಂಘಟನೆಯ ಸಂಸ್ಕೃತಿಯೇ ಆಗಿದೆ ಎಂದು ಅವರು ಹೇಳಿದ್ದಾರೆ.

ಕಳೆದ ಆಗಸ್ಟ್‌ 15ರಂದು ಜಿಲ್ಲಾಧಿಕಾರಿಯ ಆದೇಶವನ್ನು ಉಲ್ಲಂಘಿಸಿ ಪಾಲಕ್ಕಾಡ್‌ನ ಶಾಲೆಯೊಂದರಲ್ಲಿ ಭಾಗವತ್‌ ಧ್ವಜಾರೋಹಣ ಮಾಡಿದ್ದರು. ಕೇರಳದಲ್ಲಿ ಆರ್‌ಎಸ್‌ಎಸ್‌ ಗಣನೀಯ ಪ್ರಾಬಲ್ಯ ಹೊಂದಿದೆ. ಆರ್‌ಎಸ್‌ಎಸ್‌ ಮತ್ತು ಸಿಪಿಎಂ ಕಾರ್ಯಕರ್ತರ ನಡುವೆ ಅಲ್ಲಿ ಆಗಾಗ ಸಂಘರ್ಷವೂ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.