ADVERTISEMENT

ಲಾಲುಗೆ ಮೊದಲೇ ಜೈಲಿಗೆ ಹೋದ ‘ಸೇವಕರು’

ಹಲ್ಲೆ, ದರೋಡೆ ಪ್ರಕರಣದಲ್ಲಿ ಬಿರ್ಸಾ ಮುಂಡಾ ಕಾರಾಗೃಹ ಸೇರಿದ ಇಬ್ಬರು

​ಪ್ರಜಾವಾಣಿ ವಾರ್ತೆ
Published 9 ಜನವರಿ 2018, 19:30 IST
Last Updated 9 ಜನವರಿ 2018, 19:30 IST
ಲಾಲುಗೆ ಮೊದಲೇ ಜೈಲಿಗೆ ಹೋದ ‘ಸೇವಕರು’
ಲಾಲುಗೆ ಮೊದಲೇ ಜೈಲಿಗೆ ಹೋದ ‘ಸೇವಕರು’   

ಪಟ್ನಾ: ಮೇವು ಹಗರಣದ ಪ್ರಕರಣವೊಂದರಲ್ಲಿ ತಪ್ಪಿತಸ್ಥರಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ರಾಂಚಿಯ ಬಿರ್ಸಾ ಮುಂಡಾ ಕಾರಾಗೃಹಕ್ಕೆ ಡಿಸೆಂಬರ್ 23ರಂದು ರವಾನೆಯಾಗುವುದಕ್ಕೆ ಕೆಲವೇ ಗಂಟೆಗಳ ಮೊದಲೇ ಅವರ ಇಬ್ಬರು ಆಪ್ತ ಸಹಾಯಕರು ಅದೇ ಜೈಲಿನ ಸೆರೆವಾಸಿಗಳಾಗಿದ್ದರು.

ಆ ಇಬ್ಬರು ಕೈದಿಗಳನ್ನು ಲಕ್ಷ್ಮಣ್ ಮಹ್ತೊ ಮತ್ತು ಮದನ್ ಯಾದವ್ ಎಂದು ಗುರುತಿಸಲಾಗಿದೆ. ಇದು ಕಾಕತಾಳೀಯವಾಗಿರದೆ, ಪೂರ್ವಯೋಜಿತವಾಗಿದ್ದರೆ ಲಾಲು ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ ವಕೀಲರೊಬ್ಬರು ಹೇಳಿದ್ದಾರೆ.

‘ಈ ಇಬ್ಬರ ವಿರುದ್ಧ ಡಿಸೆಂಬರ್ 23ರಂದು ರಾಂಚಿಯ ಲೋಯರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಸುಮಿತ್ ಯಾದವ್ ಎಂಬುವವರು ದೂರು ದಾಖಲಿಸಿದ್ದಾರೆ. ‘ಮದನ್ ನನ್ನ ನೆರೆಯ ನಿವಾಸಿಯಾಗಿದ್ದು, ಆತ ಮತ್ತು ಆತನ ಸ್ನೇಹಿತ ಲಕ್ಷ್ಮಣ್ ನನ್ನ ಮೇಲೆ ಹಲ್ಲೆ ನಡೆಸಿ ₹ 10,000 ಕಿತ್ತುಕೊಂಡಿದ್ದಾರೆ’ ಎಂದು ಸುಮಿತ್ ದೂರಿನಲ್ಲಿ ವಿವರಿಸಿದ್ದಾರೆ’ ಎಂದು ಮೂಲಗಳು ಹೇಳಿವೆ.

ADVERTISEMENT

‘ಲೋಯರ್ ಬಜಾರ್ ಠಾಣೆಯಲ್ಲಿ ದೂರು ನೀಡುವ ಮುನ್ನ ಸುಮಿತ್ ಇದೇ ದೂರನ್ನು ದೊರಾಂಡ ಪೊಲೀಸ್ ಠಾಣೆಯಲ್ಲಿ ದಾಖಲಿಸಲು ಪ್ರಯತ್ನಿಸಿದ್ದಾರೆ. ಅಲ್ಲಿ ದೂರು ಸ್ವೀಕರಿಸಲು ಪೊಲೀಸರು ನಿರಾಕರಿಸಿದ ಕಾರಣ ಲೋಯರ್ ಬಜಾರ್ ಠಾಣೆಯ ಮೊರೆ ಹೋಗಿದ್ದಾರೆ. ಅಲ್ಲಿನ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎಫ್‌ಐಆರ್ ದಾಖಲಾದ ಕೆಲವೇ ನಿಮಿಷಗಳಲ್ಲಿ ಇಬ್ಬರು ಆರೋಪಿಗಳೂ ನ್ಯಾಯಾಲಯಕ್ಕೆ ಶರಣಾಗಿದ್ದಾರೆ. ಅವರನ್ನು ಅಂದೇ ಬಿರ್ಸಾ ಮುಂಡಾ ಜೈಲಿಗೆ ಕಳುಹಿಸಲಾಗಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

ಲಾಲು ಅವರಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಇದೆ. ಹೃದಯದ ಕವಾಟದ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ದಿನಕ್ಕೆ 15 ಬಾರಿ ಔಷಧ ತೆಗೆದುಕೊಳ್ಳಬೇಕು. ಲಾಲುಗೆ ಊಟ ಮತ್ತು ಔಷಧ ನೀಡುವುದನ್ನು ಲಕ್ಷಣ್ ನೋಡಿಕೊಳ್ಳುತ್ತಾರೆ. 2013ರಲ್ಲಿ ಲಾಲು ಜೈಲಿಗೆ ಹೋದಾಗಲೂ ಲಕ್ಷ್ಮಣ್ ಜೈಲಿಗೆ ಹೋಗಿದ್ದರು. ಈಗಲೂ ಅವರು ಜೈಲಿಗೆ ಹೋಗಿರುವುದರಿಂದ ಲಾಲು ಕುಟುಂಬ ನಿರಾಳವಾಗಿದೆ ಎಂದು ಮೂಲಗಳು ಹೇಳಿವೆ.

ಈ ಹಿಂದೆ ಲಾಲು ಜೈಲಿಗೆ ಹೋದಾಗ ಬಿಹಾರದಲ್ಲಿ ಆರ್‌ಜೆಡಿ ಸರ್ಕಾರವಿತ್ತು. ಹೀಗಾಗಿ ಮದನ್ ಆಗ ಜೈಲಿಗೆ ಹೋಗಿರಲಿಲ್ಲ. ಬದಲಿಗೆ ಆಗಾಗ ಲಾಲುವನ್ನು ಭೇಟಿ ಮಾಡುತ್ತಿದ್ದರು. ಈಗ ರಾಜ್ಯದಲ್ಲಿ ಜೆಡಿಯು–ಬಿಜೆಪಿ ಮೈತ್ರಿ ಸರ್ಕಾರವಿದೆ. ಬೇಕೆಂದಾಗ ಜೈಲಿಗೆ ಭೇಟಿ ನೀಡಲು ಸಾಧ್ಯವಿಲ್ಲದ ಕಾರಣ ಮದನ್ ಸಹ ಜೈಲಿಗೆ ಹೋಗಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

‘2013ರಲ್ಲಿ ಲಕ್ಷ್ಮಣ್ ಜೈಲಿಗೆ ಹೋಗಿದ್ದರು. ಈಗಲೂ ಅವರು ಜೈಲಿಗೆ ಹೋಗಿರುವುದು ಕಾಕತಾಳೀಯ ಆಗಿರಲಾರದು. ಲಾಲು ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ಈ ವಿಚಾರ ಅವರಿಗೇ ಮುಳುವಾಗುವ ಸಾಧ್ಯತೆ ಇದೆ’ ಎಂದು ವಕೀಲರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.