ADVERTISEMENT

‘ಸುಪ್ರೀಂ’ಗೆ ಮತ್ತೊಬ್ಬರು ಮಹಿಳಾ ನ್ಯಾಯಮೂರ್ತಿ

ಕೊಲಿಜಿಯಂ ಶಿಫಾರಸು: ನೇರ ನೇಮಕವಾಗಲಿರುವ ಮೊದಲ ಮಹಿಳೆ ಇಂದು ಮಲ್ಹೋತ್ರಾ

ಪಿಟಿಐ
Published 11 ಜನವರಿ 2018, 20:00 IST
Last Updated 11 ಜನವರಿ 2018, 20:00 IST
ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌  ಮತ್ತು  ಇಂದು ಮಲ್ಹೋತ್ರಾ
ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್‌ ಮತ್ತು ಇಂದು ಮಲ್ಹೋತ್ರಾ   

ನವದೆಹಲಿ: ಹಿರಿಯ ವಕೀಲರಾದ ಇಂದು ಮಲ್ಹೋತ್ರಾ ಅವರನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಕೊಲಿಜಿಯಂ ಶಿಫಾರಸು ಮಾಡಿದೆ. ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ನೇರವಾಗಿ ನೇಮಕವಾಗಲಿರುವ ಮೊದಲ ಮಹಿಳೆ ಎಂಬ ಹಿರಿಮೆಗೆ ಇಂದು ಮಲ್ಹೋತ್ರಾ ಪಾತ್ರವಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್‌ ಹೆಸರನ್ನೂ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿದೆ. ಉತ್ತರಾಖಂಡದ ಮೇಲೆ 2016ರಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆ ಆದೇಶವನ್ನು ರದ್ದು ಮಾಡಿದ ಪೀಠದಲ್ಲಿ ಜೋಸೆಫ್‌ ಅವರೂ ಇದ್ದರು.

ಇಂದು ಅವರು ನೇಮಕವಾದರೆ ಸ್ವಾತಂತ್ರ್ಯಾನಂತರ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೇರಿದ ಏಳನೇ ಮಹಿಳೆ ಎನಿಸಿಕೊಳ್ಳಲಿದ್ದಾರೆ. ಉಳಿದವರೆಲ್ಲವರೂ ಹೈಕೋರ್ಟ್‌ಗಳಿಂದ ಬಡ್ತಿಯಾಗಿ ಬಂದವರು. ಈಗ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಕೆಲಸ ಮಾಡುತ್ತಿರುವ ಏಕೈಕ ಮಹಿಳೆ ಆರ್‌. ಭಾನುಮತಿ. ಇಂದು ಅವರನ್ನು 2007ರಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲೆ ಎಂದು ನಿಯೋಜಿಸಲಾಗಿತ್ತು.

ADVERTISEMENT

1950ರಲ್ಲಿ ಸುಪ್ರೀಂ ಕೋರ್ಟ್‌ ಸ್ಥಾಪನೆಯಾಯಿತು. 67 ವರ್ಷಗಳ ಇತಿಹಾಸದಲ್ಲಿ ಎರಡು ಬಾರಿ ಮಾತ್ರ ಸುಪ್ರೀಂ ಕೋರ್ಟ್‌ನಲ್ಲಿ ಇಬ್ಬರು ಮಹಿಳಾ ನ್ಯಾಯಮೂರ್ತಿಗಳಿದ್ದರು. ಜ್ಞಾನ್‌ ಸುಧಾ ಮತ್ತು ರಂಜನಾ ಅವರು ಜತೆಯಾಗಿ ಕೆಲಸ ಮಾಡಿದ್ದರು. ಹಾಗೆಯೇ ರಂಜನಾ ಮತ್ತು ಭಾನುಮತಿ ಅವರೂ ಒಂದೇ ಸಮಯದಲ್ಲಿ ನ್ಯಾಯಮೂರ್ತಿಗಳಾಗಿದ್ದರು.
***

ಮೊದಲ ಆರು ಮಹಿಳೆಯರು
ಮಹಿಳಾ ನ್ಯಾಯಮೂರ್ತಿ ನೇಮಕವಾದ ವರ್ಷ

* ಎಂ. ಫಾತಿಮಾ ಬೀವಿ 1950
* ಸುಜಾತಾ ವಿ. ಮನೋಹರ್‌ 1994
* ರುಮಾ ಪಾಲ್‌ 2000
* ಜ್ಞಾನ್‌ ಸುಧಾ ಮಿಶ್ರಾ 2010
* ರಂಜನಾ ಪ್ರಕಾಶ್‌ ದೇಸಾಯಿ 2011
* ಆರ್‌. ಭಾನುಮತಿ 2014

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.