ADVERTISEMENT

ಸುಪ್ರೀಂ ಕೋರ್ಟ್‌ನಲ್ಲಿ ಬಿಕ್ಕಟ್ಟಿಲ್ಲ

ಪಿಟಿಐ
Published 13 ಜನವರಿ 2018, 20:07 IST
Last Updated 13 ಜನವರಿ 2018, 20:07 IST
ಸುಪ್ರೀಂ ಕೋರ್ಟ್‌ನಲ್ಲಿ ಬಿಕ್ಕಟ್ಟಿಲ್ಲ
ಸುಪ್ರೀಂ ಕೋರ್ಟ್‌ನಲ್ಲಿ ಬಿಕ್ಕಟ್ಟಿಲ್ಲ   

ನವದೆಹಲಿ: ‘ಸುಪ್ರೀಂ ಕೋರ್ಟ್‌ನಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ನಾವು ಪ್ರಸ್ತಾಪಿಸಿರುವ ವಿಷಯಗಳು ಬಗೆಹರಿಯಲಿವೆ’ ಎಂದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ವಿರುದ್ಧ ಬಹಿರಂಗವಾಗಿಯೇ ಅತೃಪ್ತಿ ಹೊರಹಾಕಿರುವ ನಾಲ್ವರು ನ್ಯಾಯಮೂರ್ತಿಗಳ ಪೈಕಿ ಇಬ್ಬರಾದ ರಂಜನ್‌ ಗೊಗೋಯ್‌ ಮತ್ತು ಕುರಿಯನ್‌ ಜೋಸೆಫ್‌ ಶನಿವಾರ ಹೇಳಿದ್ದಾರೆ.

ಕೋಲ್ಕತ್ತದಲ್ಲಿ ಮಾತನಾಡಿರುವ ಗೊಗೋಯ್‌, ‘ಆಡಳಿತಾತ್ಮಕ ಪ್ರಕ್ರಿಯೆಗಳಲ್ಲಿ ಮಾತ್ರ ಸಮಸ್ಯೆಗಳಿವೆ. ಅದನ್ನು ಸರಿಪಡಿಸಬಹುದು’ ಎಂದು ಹೇಳಿದ್ದಾರೆ.

ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸುವ ದಾರಿ ಹೇಗೆ ಎಂಬ ಪ್ರಶ್ನೆಗೆ, ‘ಯಾವುದೇ ಬಿಕ್ಕಟ್ಟು ಇಲ್ಲ’ ಎಂದು ಅವರು ಉತ್ತರಿಸಿದ್ದಾರೆ.

ADVERTISEMENT

ಕೇರಳದ ಕೊಚ್ಚಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನ್ಯಾಯಮೂರ್ತಿ ಕುರಿಯನ್‌ ಜೋಸೆಫ್‌, ‘ನ್ಯಾಯಾಂಗ ಮತ್ತು ನ್ಯಾಯದ ಹಿತಾಸಕ್ತಿ ಕಾಪಾಡುವ ಏಕೈಕ ಉದ್ದೇಶದಿಂದ ಸುದ್ದಿಗೋಷ್ಠಿ ನಡೆಸುವಂತಹ ‘ಅಸಾಧಾರಣ’ ಹೆಜ್ಜೆ ಇಟ್ಟೆವು’ ಎಂದು ಹೇಳಿದ್ದಾರೆ.

ನ್ಯಾಯಾಂಗದ ಶಿಸ್ತನ್ನು ನಾಲ್ವರು ನ್ಯಾಯಮೂರ್ತಿಗಳು ಉಲ್ಲಂಘಿಸಿದ್ದಾರೆ ಎಂಬ ಆರೋಪ ತಳ್ಳಿ ಹಾಕಿದ ಅವರು, ತಾವು ತೆಗೆದುಕೊಂಡ ಕ್ರಮಗಳು ಸುಪ್ರೀಂ ಕೋರ್ಟ್‌ನ ಆಡಳಿತದಲ್ಲಿ ಇನ್ನಷ್ಟು ಪಾರದರ್ಶಕತೆ ತರಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಈ ವಿಚಾರ ಈಗ ಎಲ್ಲರ ಗಮನಕ್ಕೆ ಬಂದಿದೆ. ಹಾಗಾಗಿ ಅದು ಖಂಡಿತ ಬಗೆಹರಿಯಲಿದೆ. ನ್ಯಾಯಾಂಗದ ಮೇಲಿನ ಜನರ ವಿಶ್ವಾಸವನ್ನು ಮತ್ತಷ್ಟು ವೃದ್ಧಿಸುವುದಕ್ಕಾಗಿ ಈ ರೀತಿ ಮಾಡಿದೆವು’ ಎಂದು ಅವರು ಸುದ್ದಿಗೋಷ್ಠಿಯನ್ನು ಸಮರ್ಥಿಸಿಕೊಂಡಿದ್ದಾರೆ.

***

ಈ ವಿಚಾರದಲ್ಲಿ ನಾವು ನಾಲ್ವರೂ ಒಟ್ಟಾಗಿದ್ದೇವೆ. ಒಂದೇ ಧ್ವನಿಯಲ್ಲೇ ಮಾತನಾಡಿದ್ದೇವೆ. ಮುಂದೆಯೇ ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ
– ಜೆ.ಚಲಮೇಶ್ವರ್‌, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.