ADVERTISEMENT

ವಕೀಲರಿಂದ ಶಮನ ಯತ್ನ

ನ್ಯಾಯಮೂರ್ತಿಗಳ ಭೇಟಿಗೆ ವಕೀಲ ಸಂಘಟನೆಗಳ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 19:46 IST
Last Updated 13 ಜನವರಿ 2018, 19:46 IST
ವಕೀಲರಿಂದ ಶಮನ ಯತ್ನ
ವಕೀಲರಿಂದ ಶಮನ ಯತ್ನ   

ನವದೆಹಲಿ: ಪ್ರಕರಣಗಳ ಹಂಚಿಕೆ ಸೇರಿದಂತೆ ಕೆಲವು ಆಡಳಿತಾತ್ಮಕ ವಿಚಾರಗಳ ಸಂಬಂಧ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ವಿರುದ್ಧ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಬಹಿರಂಗವಾಗಿ ಅತೃಪ್ತಿ ಹೊರಹಾಕಿದ್ದರಿಂದ ಉಂಟಾಗಿರುವ ಬಿಕ್ಕಟ್ಟು ಶಮನಕ್ಕೆ ವಕೀಲರ ಎರಡು ಪ್ರಮುಖ ಸಂಘಟನೆಗಳು ಮುಂದಾಗಿವೆ.

ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ಸುಪ್ರೀಂ ಕೋರ್ಟ್‌ನ ವಕೀಲರ ಒಕ್ಕೂಟ (ಎಸ್‌ಸಿಬಿಎ) ಶನಿವಾರ ಮಹತ್ವದ ನಿರ್ಧಾರಗಳನ್ನು ಕೈಗೊಂಡಿವೆ.

ಇತ್ಯರ್ಥಕ್ಕೆ ಬಾಕಿ ಇರುವುದೂ ಸೇರಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿರುವ ಎಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು (ಪಿಐಎಲ್‌) ಮುಖ್ಯ ನ್ಯಾಯಮೂರ್ತಿ ಸೇರಿ ಐವರು ನ್ಯಾಯಮೂರ್ತಿಗಳಿರುವ ಪೀಠಕ್ಕೆ ವಹಿಸುವಂತೆ ಸಿಜೆಐಗೆ ಸುಪ್ರೀಂ ಕೋರ್ಟ್‌ನ ವಕೀಲರ ಒಕ್ಕೂಟ ಸಲಹೆ ನೀಡಿದೆ. 

ADVERTISEMENT

ನಾಲ್ವರು ನ್ಯಾಯಮೂರ್ತಿಗಳು ಎತ್ತಿರುವ ವಿಚಾರಗಳು ಅತ್ಯಂತ ಗಂಭೀರ ಸ್ವರೂಪದ್ದಾಗಿದ್ದು, ಇದನ್ನು ಪೂರ್ಣ ಪೀಠದ ಮುಂದೆ ಬಗೆಹರಿಸಿಕೊಳ್ಳಬೇಕು ಎಂದು ಅದು ಪ್ರತಿಪಾದಿಸಿದೆ.

ಜೊತೆಗೆ, ಸುಪ್ರೀಂ ಕೋರ್ಟ್‌ನ ಎಲ್ಲ ನ್ಯಾಯಮೂರ್ತಿಗಳನ್ನು ವೈಯಕ್ತಿಕವಾಗಿ ಭೇಟಿಯಾಗಲೂ ಅದು ತೀರ್ಮಾನಿಸಿದೆ. ಏಳು ಸದಸ್ಯರ ಸಮಿತಿ: ಶನಿವಾರ ಸಭೆ ಸೇರಿದ್ದ ಭಾರತೀಯ ವಕೀಲರ ಪರಿಷತ್ತು, ಬಿಕ್ಕಟ್ಟನ್ನು ಸುಪ್ರೀಂ ಕೋರ್ಟ್‌ ಮಟ್ಟದಲ್ಲಿಯೇ ಬಗೆಹರಿಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಬಿಕ್ಕಟ್ಟನ್ನು ಪರಿಹರಿಸುವ ಯತ್ನವಾಗಿ ಅದು ಏಳು ಸದಸ್ಯರ ಸಮಿತಿಯನ್ನು ರಚಿಸಿದೆ. ಸಮಿತಿ ಸದಸ್ಯರು ಭಾನುವಾರ ಸಿಜೆಐ ಮತ್ತು ನಾಲ್ವರು ಹಿರಿಯ ನ್ಯಾಯಮೂರ್ತಿಗಳನ್ನು (ಅತೃಪ್ತಿ ಹೊರಹಾಕಿದವರು) ಬಿಟ್ಟು ಉಳಿದ ನ್ಯಾಯಮೂರ್ತಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ.

ರಾಜಕೀಯ ಲಾಭ ಬೇಡ: ‘ಯಾವುದೇ ರಾಜಕೀಯ ಪಕ್ಷ ಅಥವಾ ವ್ಯಕ್ತಿ ಈಗಿನ ಪರಿಸ್ಥಿತಿಯ ಲಾಭ ಪಡೆಯಬಾರದು’ ಎಂದು ಬಿಸಿಐ ಅಧ್ಯಕ್ಷ ಮನನ್‌ ಕುಮಾರ್‌ ಮಿಶ್ರಾ ಹೇಳಿದ್ದಾರೆ.

‘ನಾವು ಮಧ್ಯಸ್ಥಿಕೆ ವಹಿಸಲು ಸಿದ್ಧ. ಈ ವಿಚಾರಗಳೆಲ್ಲ ಬಹಿರಂಗವಾಗಬಾರದು’ ಎಂದು ಅವರು ಹೇಳಿದ್ದಾರೆ.

ಸಿಜೆಐ ಮನೆಗೆ ಪ್ರಧಾನಿ ಪ್ರಧಾನ ಕಾರ್ಯದರ್ಶಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರಾ ಅವರು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನಿವಾಸದತ್ತ ಶನಿವಾರ ಹೋಗುತ್ತಿದ್ದ ದೃಶ್ಯವನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿವೆ.

5, ಕೃಷ್ಣ ಮೆನನ್‌ ಮಾರ್ಗದಲ್ಲಿರುವ ದೀಪಕ್‌ ಮಿಶ್ರಾ ಅವರ ಅಧಿಕೃತ ನಿವಾಸದತ್ತ ನೃಪೇಂದ್ರ ಮಿಶ್ರಾ ಕಾರು ತೆರಳುತ್ತಿರುವ ದೃಶ್ಯ ವಿಡಿಯೊದಲ್ಲಿತ್ತು. ಆದರೆ, ಮನೆಯ ಗೇಟು ತೆರೆಯಲಿಲ್ಲ. ಸ್ವಲ್ಪ ಹೊತ್ತು ಕಾದ ನಂತರ ನೃ‍ಪೇಂದ್ರ ಮಿಶ್ರಾ ಅವರ ಕಾರು ವಾಪಸ್‌ ಹೋಗುವ ದೃಶ್ಯವೂ ಕಂಡು ಬಂತು.

ಗೇಟಿನ ಬಳಿ ಇದ್ದ ಭದ್ರತಾ ಸಿಬ್ಬಂದಿ, ‘ಸಾಹೇಬರು ಪೂಜೆಯಲ್ಲಿದ್ದಾರೆ’ ಎಂದು ಮಿಶ್ರಾ ಅವರಿಗೆ ತಿಳಿಸಿದರು ಎಂದು ಗೊತ್ತಾಗಿದೆ. ನಾಲ್ವರು ನ್ಯಾಯಮೂರ್ತಿಗಳು ಸಿಜೆಐ ವಿರುದ್ಧ ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ ಮರುದಿನವೇ ಪ್ರಧಾನಿ ಕಚೇರಿಯ ಅಧಿಕಾರಿಯೊಬ್ಬರು ಸಿಜೆಐ ಭೇಟಿಗೆ ಯತ್ನಿಸಿರುವುದು ಕುತೂಹಲ ಮೂಡಿಸಿದೆ.

ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತಯೇ ಸ್ಪಷ್ಟನೆ ನೀಡಿದ ನೃಪೇಂದ್ರ ಮಿಶ್ರಾ, ‘ನಾನು ನನ್ನ ಕಚೇರಿಗೆ ಹೋಗುತ್ತಿದ್ದೆ. ಹೊಸ ವರ್ಷದ ಶುಭಾಶಯ ತಿಳಿಸಲು ನನ್ನ ಕಾರ್ಡ್‌ ಅನ್ನು ನೀಡುವುದಕ್ಕಾಗಿ ಸಿಜೆಐ ನಿವಾಸದ ಬಳಿ ನಿಲ್ಲಿಸಿದೆ. ಅಲ್ಲಿ ನನ್ನ ಕಾರ್ಡ್‌ ಕೊಟ್ಟೆ. ಅವರನ್ನು ನಾನು ಭೇಟಿಯಾಗಿಲ್ಲ’ ಎಂದು ಹೇಳಿದ್ದಾರೆ.

‘ಸಿಜೆಐ ದೀಪಕ್‌ ಮಿಶ್ರಾ ಅವರನ್ನು ಭೇಟಿಯಾಗಲು ನಾನು ಹೋಗಿಲ್ಲ. ಈಗಿನ ಬಿಕ್ಕಟ್ಟಿಗೂ ನಾನು ಅಲ್ಲಿಗೆ ಹೋಗಿದ್ದಕ್ಕೂ ಸಂಬಂಧ ಇಲ್ಲ. ತುಘಲಕ್‌ ರಸ್ತೆಯಲ್ಲಿ ಇದ್ದಾಗ ಅವರು ನನ್ನ ನೆರೆಯವರಾಗಿದ್ದರು’ ಎಂದು ಅವರು ಹೇಳಿದ್ದಾರೆ.

ಸ್ಪಷ್ಟನೆ ಕೇಳಿದ ಕಾಂಗ್ರೆಸ್‌: ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ರಣದೀಪ್‌ ಸಿಂಗ್‌ ಸುರ್ಜೇವಾಲಾ, ‘ವಿಶೇಷ ದೂತ’ನನ್ನು ಸಿಜೆಐ ಮನೆಗೆ ಕಳುಹಿಸಿದ್ದು ಏಕೆ ಎಂದು ಪ್ರಧಾನಿ ಉತ್ತರಿಸಬೇಕು ಎಂದು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.