ADVERTISEMENT

ಠಾಣೆಯಲ್ಲೇ ಮಕ್ಕಳಿಗೆ ಚಿಕಿತ್ಸೆ!

ಪಿಟಿಐ
Published 15 ಜನವರಿ 2018, 19:30 IST
Last Updated 15 ಜನವರಿ 2018, 19:30 IST

ತಿರುವುನಂತಪುರ: ಗಾಢ ಕತ್ತಲ ಲಾಕ್‌ಅಪ್‌ ರೂಂಗಳು,  ಖಾಕಿ ಬಟ್ಟೆ ಧರಿಸಿದ ಕಠೋರ ಮುಖಭಾವದ ಅಧಿಕಾರಿಗಳನ್ನು ಕಂಡರೆ ಮಕ್ಕಳಿಗೆ ಭಯ. ಮಕ್ಕಳಲ್ಲಿರುವ ಈ ಭಯ ಹೋಗಲಾಡಿಸಿ ಅವರ ಸಮಸ್ಯೆಗೆ ಸ್ಪಂದಿಸಲು ಕೇರಳ ಕಣ್ಣೂರಿನ ನಗರ ಠಾಣೆ ವಿಶಿಷ್ಟ ರೀತಿಯ ಕಾರ್ಯಕ್ರಮವೊಂದನ್ನು ಜಾರಿಗೆ ತಂದಿದೆ.

ಸಮುದಾಯದತ್ತ ಪೊಲೀಸ್‌ ಕಾರ್ಯಕ್ರಮದ ಭಾಗವಾಗಿ ಕಣ್ಣೂರು ನಗರ ಠಾಣೆಯಲ್ಲಿ ಚಿಕ್ಕಮಕ್ಕಳ ಚಿಕಿತ್ಸಾ ಘಟಕ ಪ್ರಾರಂಭಿಸಲಾಗಿದೆ. ಪ್ರತಿ ಭಾನುವಾರ ಇಲ್ಲಿಗೆ ವೈದ್ಯರು ಬರುವ ಮಕ್ಕಳ ಆರೋಗ್ಯ ತಪಾಸಣೆ ನಡೆಸಲಿದ್ದಾರೆ.

ಈ ಕಾರ್ಯಕ್ರಮಕ್ಕಾಗಿ ಠಾಣೆಯಲ್ಲಿ ಮಕ್ಕಳ ಸ್ನೇಹಿ ಘಟಕವೊಂದನ್ನು ಸ್ಥಾಪಿಸಲಾಗಿದೆ. ಠಾಣೆಯ ಬಗ್ಗೆ  ಮಕ್ಕಳಲ್ಲಿರುವ ಭಯ ಹೋಗಲಾಡಿಸಲು ಈ ಘಟಕದ ಗೋಡೆಯ ಮೇಲಿರುವ ಚಿತ್ತಾಕರ್ಷಕ ಕಲಾಕೃತಿಗಳು, ವ್ಯಂಗ್ಯಚಿತ್ರಗಳನ್ನು ರಚಿಸಲಾಗಿದ್ದು, ಅವು ಮಕ್ಕಳ ಮನಸ್ಸಿಗೆ ಮುದ ನೀಡುವಂತಿವೆ.

ADVERTISEMENT

ಪೊಲೀಸರ ಪ್ರಯತ್ನಕ್ಕೆ ಭಾರತೀಯ ‌ಮಕ್ಕಳ ತಜ್ಞರ ಸಂಘ(ಐಎಪಿ)ಸಾಥ್‌ ನೀಡಿದೆ. ಪ್ರತಿವಾರಕ್ಕೆ ಒಬ್ಬರಂತೆ ಒಟ್ಟು 14 ವೈದ್ಯರ ತಂಡ ಇಲ್ಲಿಗೆ ಬಂದು ಮಕ್ಕಳಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಿದೆ.

ರಜಾದಿನಗಳಲ್ಲಿ ವೈದ್ಯರು ಸಿಗುವುದು ಕಷ್ಟ. ಅದರಲ್ಲೂ ಚಿಕ್ಕಮಕ್ಕಳ ತಜ್ಞರ ಸೇವೆ ಸಿಗುವುದು ತುಂಬಾ ಕಷ್ಟ. ಹಾಗಾಗಿ ಠಾಣೆಯಲ್ಲಿ ಮಕ್ಕಳ ಸ್ನೇಹಿ ಘಟಕವೊಂದನ್ನು ಸ್ಥಾಪಿಸುವ ನಿರ್ಧಾರ ಮಾಡಲಾಯಿತು. ಕಾರ್ಯಕ್ರಮದ ರೂಪರೇಷ ಸಿದ್ಧಪಡಿಸಿರುವ ಠಾಣೆಯ ವೃತ್ತ ನಿರೀಕ್ಷಕ ಟಿ.ಕೆ ರತ್ನಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.