ADVERTISEMENT

‘ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಸಂಚು’: ಪ್ರವೀಣ್ ತೊಗಾಡಿಯಾ ಆರೋಪ

ಏಜೆನ್ಸೀಸ್
Published 16 ಜನವರಿ 2018, 10:20 IST
Last Updated 16 ಜನವರಿ 2018, 10:20 IST
‘ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಸಂಚು’: ಪ್ರವೀಣ್ ತೊಗಾಡಿಯಾ ಆರೋಪ
‘ನನ್ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಸಂಚು’: ಪ್ರವೀಣ್ ತೊಗಾಡಿಯಾ ಆರೋಪ   

ಅಹಮದಾಬಾದ್: ತಮ್ಮನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಲು ಸಂಚು ನಡೆದಿತ್ತು ಎಂದು ವಿಶ್ವ ಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಆರೋಪಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದುತ್ವ ಮತ್ತು ರಾಮ ಮಂದಿರದ ಬಗ್ಗೆ ನಾನು ಮಾತನಾಡುವುದನ್ನು ಬಯಸದ ಜನ ನನ್ನ ವಿರುದ್ಧ ಪಿತೂರಿ ಮಾಡಿದ್ದಾರೆ. ಯಾರು ನನ್ನ ದನಿ ಅಡಗಿಸಲು ಬಯಸುತ್ತಿದ್ದಾರೆ ಎಂಬುದನ್ನು ಸಮಯ ಬಂದಾಗ ಸಾಕ್ಷ್ಯ ಸಮೇತ ಬಹಿರಂಗಪಡಿಸುವೆ’ ಎಂದು ಹೇಳಿದರು.

ತೊಗಾಡಿಯಾರನ್ನು ಹುಡುಕಿಕೊಂಡು ರಾಜಸ್ಥಾನ ಪೊಲೀಸರ ತಂಡ ಸೋಮವಾರ ಅಹಮದಾಬಾದ್‌ಗೆ ಬಂದಿತ್ತು. ಆದರೆ, ಅವರು ನಾಪತ್ತೆಯಾಗಿದ್ದರು.

ADVERTISEMENT

ಸೋಮವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅವರು ರಾತ್ರಿ ವೇಳೆ ಅಹಮದಾಬಾದ್‌ನ ಆಸ್ಪತ್ರೆಯೊಂದರಲ್ಲಿ ಪತ್ತೆಯಾಗಿದ್ದರು. ‘ರಕ್ತದಲ್ಲಿ ಕಡಿಮೆ ಸಕ್ಕರೆ ಅಂಶದ ಕಾರಣ ಅವರು ಪ್ರಜ್ಞಾಹೀನರಾಗಿದ್ದರು. ಶಾಹಿಬಾಗ್ ಉದ್ಯಾನದಲ್ಲಿ ಪ್ರಜ್ಞಾಹೀನರಾಗಿದ್ದ ಅವರನ್ನು ಚಂದ್ರಮಣಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ’ ಎಂದು ವಿಎಚ್‌ಪಿ ತಿಳಿಸಿತ್ತು.

‘ದನಿಯಡಗಿಸುವ ಯತ್ನ’: ‘ದಶಕದಷ್ಟು ಹಳೆಯ ಪ್ರಕರಣವೊಂದರಲ್ಲಿ ನನ್ನನ್ನು ಗುರಿ ಮಾಡಲಾಗುತ್ತಿದೆ. ಇದರ ಹಿಂದೆ ನನ್ನ ಧ್ವನಿ ಅಡಗಿಸುವ ಹುನ್ನಾರವಿದೆ. ರಾಜಸ್ಥಾನ ಪೊಲೀಸರ ತಂಡ ನನ್ನನ್ನು ಬಂಧಿಸಲು ಬಂದಿತ್ತು. ಎನ್‌ಕೌಂಟರ್‌ ಮಾಡಿ ನನ್ನನ್ನು ಹತ್ಯೆ ಮಾಡುವ ಸಂಚು ಇದೆ ಎಂದು ಯಾರೋ ತಿಳಿಸಿದರು. ಒಬ್ಬ ಕಾರ್ಯರ್ತರು ಬಂದು ನನ್ನನ್ನು ಹತ್ಯೆ ಮಾಡುವ ಭೀತಿ ಎದುರಾಗಿದೆ ಎಂದರು. ಆಗ ನಾನು ಕಚೇರಿ ಬಿಟ್ಟು ರಿಕ್ಷಾದಲ್ಲಿ ತೆರಳಿದೆ. ಮಧ್ಯಾಹ್ನ 2.30ಗೆ ಬರುವಂತೆ ನನ್ನ ಭದ್ರತಾ ಸಿಬ್ಬಂದಿಯಲ್ಲಿ ಹೇಳಿದ್ದೆ’ ಎಂದು ತೊಗಾಡಿಯಾ ಹೇಳಿದರು.

ತೊಗಾಡಿಯಾ ಅವರು ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರಿಟ್ಟ ವಿಡಿಯೊವನ್ನು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.