ADVERTISEMENT

ಮಿಗ್‌–21 ಯುದ್ಧವಿಮಾನ ಹಾರಿಸಲಿದ್ದಾರೆ ವನಿತೆಯರು

ಭಾರತೀಯ ವಾಯುಸೇನೆ

ಏಜೆನ್ಸೀಸ್
Published 23 ಜನವರಿ 2018, 11:00 IST
Last Updated 23 ಜನವರಿ 2018, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ವಾಯುಸೇನೆಯ ಮೊದಲ ಮಹಿಳಾ ಪೈಲಟ್‌ಗಳು ಮುಂದಿನ ತಿಂಗಳು ಮಿಗ್‌–21 ಯುದ್ಧವಿಮಾನವನ್ನು ನಭಕ್ಕೆ ಹಾರಿಸಲಿದ್ದಾರೆ.

ಮಿಗ್‌–21 ತಂಡದ(ಸ್ಕ್ವಾಂಡ್ರನ್‌) ಫ್ಲೈಯಿಂಗ್‌ ಆಫೀಸರ್‌ಗಳಾದ ಅವನಿ ಚತುರ್ವೇದಿ ಮತ್ತು ಭಾವನಾ ಕಾಂತ್‌ ಅವರು ಈ ವಿಮಾನಗಳನ್ನು ಆಗಸಕ್ಕೆ ಹಾರಿಸಿ ಇತಿಹಾಸ ಬರೆಯಲು ಈಗಾಗಲೇ ತರಬೇತಿ ಪಡೆದಿದ್ದಾರೆ. ಹಾರಾಟ ಯಶಸ್ವಿಯಾದರೆ ಯುದ್ಧವಿಮಾನವನ್ನು ಒಬ್ಬಂಟಿಯಾಗಿ ಹಾರಿಸಿದ ಕೀರ್ತಿಗೆ ಈ ಸಾಹಸಿ ಮಹಿಳೆಯರು ಭಾಜನರಾಗಲಿದ್ದಾರೆ.

2016ರ ಜೂನ್‌ನಲ್ಲಿ ಅವನಿ, ಭಾವನಾ ಮತ್ತು ಮೋಹನಾ ಸಿಂಗ್‌ ಯುದ್ಧವಿಮಾನ ಚಾಲನಾ ತರಬೇತಿಗೆ ಆಯ್ಕೆ ಆಗಿದ್ದರು. ಆಗಿನಿಂದ ಇವರಿಗೆ ಪಿಲಟಸ್‌ ಪಿಸಿ–7 ಮಾದರಿ ವಿಮಾನಗಳಲ್ಲಿ ತರಬೇತಿ ನೀಡಲಾಗುತ್ತಿತ್ತು. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಅವನಿ ಮತ್ತು ಭಾವನಾ ಅವರು ವಿಮಾನ ಹಾರಿಸುವ ಕೌಶಲಗಳನ್ನು ಕರಗತ ಮಾಡಿಕೊಂಡಿದ್ದಾರೆ.

ADVERTISEMENT

ವಾಯುಸೇನೆಯ ಸುಖೊಯ್‌–30 ಯುದ್ಧವಿಮಾನಗಳಷ್ಟು ಸುಧಾರಿತ ತಂತ್ರಜ್ಞಾನ ಮಿಗ್‌–21ಗಳಲ್ಲಿ ಇಲ್ಲ. ಹಾಗಾಗಿ ಇವುಗಳ ಹಾರಿಸುವುದು ಸವಾಲೆಂದೆ ಪರಿಗಣಿಸಲಾಗಿದೆ. ಭಾರತೀಯ ವಾಯುಸೇನೆಯಲ್ಲಿ ಮಿಗ್‌–21ನ ಎಂಟು ತಂಡಗಳಿವೆ. 2020ರ ವೇಳೆಗೆ ಮಿಗ್‌ ಯುದ್ಧವಿಮಾನಗಳ ಬಳಕೆ ನಿಲ್ಲಿಸಲು ಸೇನೆ ನಿರ್ಧರಿಸಿದೆ.

ಮೋಹನಾ ಸಿಂಗ್‌ ಇನ್ನೂ ತರಬೇತಿಯಲ್ಲಿದ್ದಾರೆ. ಅವರು ಕೂಡ ಕೆಲವೇ ತಿಂಗಳಲ್ಲಿ ಯುದ್ಧವಿಮಾನ ಹಾರಿಸಲು ಸಿದ್ಧರಾಗಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.