ADVERTISEMENT

ನಾಳೆ ‘ಪದ್ಮಾವತ್‌’ ಚಿತ್ರ ಬಿಡುಗಡೆ ಖಚಿತ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 20:11 IST
Last Updated 23 ಜನವರಿ 2018, 20:11 IST
‘ಪದ್ಮಾವತ್‌’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಿಕಾ ಪಡುಕೋಣೆ ಮಂಗಳವಾರ ಮುಂಬೈ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಿಗಿ ಭದ್ರತೆಯಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದರು –ಪಿಟಿಐ ಚಿತ್ರ
‘ಪದ್ಮಾವತ್‌’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ದೀಪಿಕಾ ಪಡುಕೋಣೆ ಮಂಗಳವಾರ ಮುಂಬೈ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಬಿಗಿ ಭದ್ರತೆಯಲ್ಲಿ ಭೇಟಿ ನೀಡಿ ದೇವರ ದರ್ಶನ ಪಡೆದರು –ಪಿಟಿಐ ಚಿತ್ರ   

ನವದೆಹಲಿ: ‘ಪದ್ಮಾವತ್‌’ ಚಲನಚಿತ್ರವನ್ನು ದೇಶದಾದ್ಯಂತ ಬಿಡುಗಡೆ ಮಾಡಲು ಅವಕಾಶ ನೀಡಿ ಹೊರಡಿಸಿದ್ದ ಆದೇಶವನ್ನು ಮಾರ್ಪಾಡು ಮಾಡಲು ಸುಪ್ರೀಂ ಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ಜನವರಿ 18ರ ಆದೇಶವನ್ನು ಬದಲಾಯಿಸುವಂತೆ ಕೋರಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರಗಳು ಹಾಗೂ ಇತರರು ಸಲ್ಲಿಸಿದ್ದ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ, ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠ ವಜಾ ಮಾಡಿದೆ. 

ಸುಪ್ರೀಂ ಕೋರ್ಟ್‌ನ ಈ ನಿರ್ಧಾರದಿಂದಾಗಿ ದೇಶದಾದ್ಯಂತ ಪರ–ವಿರೋಧ ಚರ್ಚೆ ಹುಟ್ಟುಹಾಕಿರುವ ‘ಪದ್ಮಾವತ್‌’  ಚಿತ್ರ ಗುರುವಾರ (ಜ.25) ಬಿಡುಗಡೆಯಾಗುವುದು ಖಾತರಿಯಾಗಿದೆ.

ADVERTISEMENT

ಎರಡು ರಾಜ್ಯಗಳ ಮತ್ತು ಇತರರ ಅರ್ಜಿಗಳನ್ನು ಮಂಗಳವಾರ ವಿಚಾರಣೆ ನಡೆಸಿದ ನ್ಯಾಯಪೀಠ, ‘ಸಾಂವಿಧಾನಿಕ ಸಂಸ್ಥೆಯಾದ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಪ್ರಮಾಣಪತ್ರನೀಡಿರುವ ಚಿತ್ರಕ್ಕೆ ನಾವು ಹೇಗೆ ನಿಷೇಧ ಹೇರಲು ಸಾಧ್ಯ? ನೂರಾರು ಜನರು ಬೀದಿಗೆ ಬಂದು ಕಾನೂನು ಸುವ್ಯವಸ್ಥೆಯ ಸಮಸ್ಯೆ ಇದೆ ಎಂದು ಹೇಳಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ ಪ್ರತಿಪಾದಿಸಿದೆ.

ರಾಜ್ಯಗಳ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಸಿನಿಮಾಟೊಗ್ರಾಫಿ ಕಾಯ್ದೆಯ ಸೆಕ್ಷನ್‌ 6ರ ಅಡಿಯಲ್ಲಿ ಚಿತ್ರಕ್ಕೆ ನೀಡಿದ ಪ್ರಮಾಣಪತ್ರವನ್ನು ಅಮಾನತಿ ನಲ್ಲಿಡಬಹುದು ಎಂದು ಹೇಳಿದರು.

‘ಒಂದು ವೇಳೆ ಚಲನಚಿತ್ರವು ಸಮಾಜದ ಸುವ್ಯವಸ್ಥೆಯ ವಿರುದ್ಧವಾಗಿದ್ದರೆ, ಅಂತಹ ಮನವಿಯನ್ನು ಪರಿಗಣಿ ಸಲೇಬೇಕಾಗುತ್ತದೆ’ ಎಂದು ಮೆಹ್ತಾ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಈಗ ಆದೇಶವನ್ನು ಬದಲಾಯಿಸಲು ಸಾಧ್ಯವಿಲ್ಲ. ನಾವು ಮಾರ್ಪಾಡುಮಾಡುವುದು ಹೇಗೆ? ಮೊದಲು ನಮ್ಮ ಆದೇಶ ಪಾಲನೆಯಾಗಲಿ. ಸಮಸ್ಯೆ ಎದುರಾದರೆ ನಂತರ ನೋಡೋಣ’ ಎಂದು ಹೇಳಿದೆ.

’ಇದು ವಾಸ್ತವವನ್ನು ಒಪ್ಪಿಕೊಳ್ಳದೇ ನೀಡಿದ ಪ್ರತಿಕ್ರಿಯೆಯ ರೀತಿ ಇದೆ. ನಾವು ಅನಗತ್ಯವಾಗಿ ನಿಯಮಗಳನ್ನು ಮಾಡುತ್ತಿದ್ದೇವೆ’ ಎಂದು ಮೆಹ್ತಾ ಹೇಳಿ
ದರಲ್ಲದೇ, ಚಿತ್ರದ ಬಿಡುಗಡೆ ವಿರೋಧಿಸಿ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನೂ ನ್ಯಾಯಪೀಠದ ಗಮನಕ್ಕೆ ತಂದರು.

ಆದರೆ, ತನ್ನ ನಿಲುವಿಗೆ ಬದ್ಧವಾದ ನ್ಯಾಯಪೀಠ, ‘ನಮ್ಮ ಆದೇಶವನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಸಮಸ್ಯೆಸೃಷ್ಟಿಸಿ, ನಂತರ ಅದರ ಆಧಾರದಲ್ಲಿ ನಾವು ಆದೇಶ ಬದಲಾಯಿಸುವಂತೆ ಮಾಡಲು ಸಾಧ್ಯವಿಲ್ಲ’ ಎಂದು ಹೇಳಿದೆ.

‘ಕಾನೂನು ಸುವ್ಯವಸ್ಥೆಯ ಸಮಸ್ಯೆ ಇರುವುದರಿಂದ ಚಿತ್ರಕ್ಕೆ ನಿಷೇಧಹೇರಿ ಎಂದು ಜನರು ಜನರು ಬೀದಿಗಿಳಿದು ಹೇಳಲು ಸಾಧ್ಯವಿಲ್ಲ. ಸೆನ್ಸಾರ್‌ ಮಂಡಳಿ ಪ್ರಮಾಣೀಕರಿಸಿದ್ದರೂ, ಚಿತ್ರದ ಪ್ರದರ್ಶನಕ್ಕೆ ತಡೆ ಒಡ್ಡುವ ಪರಿಸ್ಥಿತಿಗೆ ನಾವು ತಲುಪುವುದು ಬೇಡ’ ಎಂದು ಅದು ಸಲಹೆ ನೀಡಿದೆ.

ಚಿತ್ರ ಬಿಡುಗಡೆಯ ವಿರುದ್ಧ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಶ್ರೀ ರಾಷ್ಟ್ರೀಯ ರಜಪೂತ ಕರ್ಣಿ ಸೇನಾ ಮತ್ತು ಅಖಿಲ ಭಾರತೀಯ ಕ್ಷತ್ರಿಯ ಮಹಾಸಭಾ ಪರ ವಾದ ಮಂಡಿಸಿದ ಹಿರಿಯ ವಕೀಲರಾದ ಎಸ್‌.ಪಿ. ಸಿಂಗ್‌ ಮತ್ತು ಅಜಯ್‌ ಕುಮಾರ್‌ ಸಿಂಗ್‌, ಚಿತ್ರದಲ್ಲಿ ‘ಪದ್ಮಾವತಿ’ಯನ್ನು ತಪ್ಪಾಗಿ ಬಿಂಬಿಸಿರುವುದರಿಂದ ಜನರ ಭಾವನೆಗಳಿಗೆಆದ ಧಕ್ಕೆಯನ್ನು ಪರಿಗಣಿಸಬೇಕು ಎಂದು ಹೇಳಿದರು.

*  ಸುಪ್ರೀಂಕೋರ್ಟ್‌ ಒಂದು ಆದೇಶವನ್ನು ಹೊರಡಿಸಿದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ಅದನ್ನು ಅವರು ಪಾಲಿಸಲೇಬೇಕು

ಸುಪ್ರೀಂ ಕೋರ್ಟ್‌ 

*  ಸುಪ್ರೀಂ ಕೋರ್ಟ್‌ ಆದೇಶವನ್ನು ನಾವು ಗೌರವಿಸುತ್ತೇವೆ. ಆದರೆ, ಜನರ ನ್ಯಾಯಾಲಯ ಯಾವಾಗಲೂ ಅತ್ಯುನ್ನತವಾದುದು (‘ಸುಪ್ರೀಂ’)

ಲೋಕೇಂದ್ರ ಸಿಂಗ್‌ ಕಾಲವಿ, ರಜಪೂತ ಕರ್ಣಿ ಸೇನಾ ಮುಖ್ಯಸ್ಥ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.