ADVERTISEMENT

ಶಾಲಾ ಬಸ್ಸಿನ ಮೇಲೆ ಕಲ್ಲು ತೂರಾಟ: 18 ಜನ ಪೊಲೀಸ್‌ ವಶಕ್ಕೆ

ಏಜೆನ್ಸೀಸ್
Published 25 ಜನವರಿ 2018, 12:19 IST
Last Updated 25 ಜನವರಿ 2018, 12:19 IST
ಶಾಲಾ ಬಸ್ಸಿನ ಮೇಲೆ ಕಲ್ಲು ತೂರಾಟ: 18 ಜನ ಪೊಲೀಸ್‌ ವಶಕ್ಕೆ
ಶಾಲಾ ಬಸ್ಸಿನ ಮೇಲೆ ಕಲ್ಲು ತೂರಾಟ: 18 ಜನ ಪೊಲೀಸ್‌ ವಶಕ್ಕೆ   

ಗುರುಗ್ರಾಮ: ಪದ್ಮಾವತ್ ಸಿನಿಮಾ ಬಿಡುಗಡೆ ವಿರೋಧಿಸಿ ಬುಧವಾರ ನಡೆದಿದ್ದ ಪ್ರತಿಭಟನೆ ವೇಳೆ ಶಾಲಾ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 18 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗುರುವಾರ 18 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಅವರನ್ನು ಸಂಜೆಯೊಳಗೆ ಸ್ಥಳೀಯ ನ್ಯಾಯಾಲಯಕ್ಕೆ ಹಾಜರಪಡಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಸೊಹ್ನಾದ ಜಿಡಿ ಗೋಯಂಕಾ ವರ್ಲ್ಡ್‌ ಶಾಲೆಯ ಮಕ್ಕಳಿದ್ದ ಶಾಲಾ ಬಸ್ಸಿನ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ. ದೊಣ್ಣೆಗಳಿಂದ ಕಿಟಕಿಗಳನ್ನು ಒಡೆದು ಹಾಕಿದ್ದಾರೆ. ಈ ಘಟನೆ ಸಿಸಿಟಿಯಲ್ಲಿ ಸೆರೆಯಾಗಿದೆ.

ADVERTISEMENT

13 ಸೆಕೆಂಡ್‌ಗಳ ವಿಡಿಯೊದಲ್ಲಿ ಬಸ್ಸಿನ ಮೇಲೆ ಪ್ರತಿಭಟನಾಕಾರರು ನಡೆಸಿರುವ ದರ್ಪ ಸ್ಪಷ್ಟವಾಗಿ ಗೋಚರವಾಗುತ್ತಿದೆ. ಅಲ್ಲದೇ ಈ ವೇಳೆ ಶಿಕ್ಷಕರು ಶಾಲಾ ಮಕ್ಕಳಿಗೆ ಸೀಟಿನ ಕೆಳಗೆ ಅವಿತು ಕುಳಿತುಕೊಳ್ಳುವಂತೆ, ಯಾರು ಮೇಲೆ ಏಳದಂತೆ ಸೂಚನೆ ನೀಡಿರುವುದು ಸೆರೆಯಾಗಿದೆ.

ಟ್ರಾಫಿಕ್ ಮುಕ್ತವಾಗುತ್ತಿದ್ದಂತೆ ಪ್ರತಿಭಟನಾಕಾರರು ಬಸ್ಸಿನ ಮೇಲೆ ದಾಳಿ ನಡೆಸಿದರು. ಅವರು ಮುಖಕ್ಕೆ ಮುಸುಕು ಹಾಕಿಕೊಂಡಿದ್ದರು ಎಂದು ಶಾಲಾ ಬಸ್ಸಿನ ಚಾಲಕ ಪರ್ವೇಶ್ ಕುಮಾರ್ ಹೇಳಿದ್ದಾರೆ.

‌ಶಾಲೆಯ ಬಸ್ಸಿನಲ್ಲಿ ನರ್ಸರಿ ಮಕ್ಕಳಿಂದ ಹಿಡಿದು ಪಿಯುಸಿವರೆಗಿನ ಒಟ್ಟು 10 ವಿದ್ಯಾರ್ಥಿಗಳು, ಮೂವರು ಶಿಕ್ಷಕರು, ಒಬ್ಬ ಕಂಡಕ್ಟರ್, ಒಬ್ಬ ಮುತುವರ್ಜಿದಾರರು ಇದ್ದರು.

ಹೊರಗೆ ಏನು ನಡೆಯುತ್ತಿದೆ ಎಂದು ಅರಿತುಕೊಳ್ಳುವಷ್ಟರಲ್ಲೇ ಪ್ರತಿಭಟನಾಕಾರರು ದಾಳಿ ನಡೆಸಿದ್ದರು. ಮನವಿ ಮಾಡಿಕೊಂಡರೂ ಸ್ಪಂದಿಸಲಿಲ್ಲ ಎಂದು ಶಾಲಾ ಸಿಬ್ಬಂದಿ ಹೇಳಿದ್ದಾರೆ.

ಘಟನೆ ಬಗ್ಗೆ ಸ್ಪಷ್ಟನೆ ನೀಡಿದ ಗುರುಗ್ರಾಮದ ಪಿಆರ್‌ಒ ಮನೀಶ್ ಸಹಗಲ್, ಶಾಲಾ ಬಸ್ಸು ಬರುತ್ತಿದ್ದ ದಾರಿಯಲ್ಲಿ ಪ್ರತಿಭಟನಾಕಾರರು ರಸ್ತೆಯ ಮಧ್ಯೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಬಸ್ಸಿನ ಮೇಲೆ ಕಲ್ಲು ತೂರಾಟ ನಡೆದಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.