ADVERTISEMENT

ಎನ್‌ಡಿಎ ಸರ್ಕಾರದ ಪೂರ್ಣ ಪ್ರಮಾಣದ ಬಜೆಟ್‌: ಜನಪ್ರಿಯತೆ ಜತೆ ಪ್ರಗತಿಗೆ ಒತ್ತು?

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2019, 4:39 IST
Last Updated 17 ಆಗಸ್ಟ್ 2019, 4:39 IST
ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇಂದು: ಜನಪ್ರಿಯತೆ ಜತೆ ಪ್ರಗತಿಗೆ ಒತ್ತು?
ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಇಂದು: ಜನಪ್ರಿಯತೆ ಜತೆ ಪ್ರಗತಿಗೆ ಒತ್ತು?   

ನವದೆಹಲಿ: ಕೇಂದ್ರದ ಎನ್‌ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್‌ ಜನರ ಓಲೈಕೆಯ ಹಿಂದೆ ಹೋಗುವ ಸಾಧ್ಯತೆ ಕಡಿಮೆ. ಆದರೆ ಅದು ಪೂರ್ಣವಾಗಿ ಜನರನ್ನು ನಿರಾಶರನ್ನಾಗಿ ಮಾಡುವ ಸಾಧ್ಯತೆಯೂ ಇಲ್ಲ. ಹಣಕಾಸು ಸಚಿವ ಅರುಣ್‌ ಜೇಟ್ಲಿ ಸಂಸತ್ತಿನಲ್ಲಿ ಗುರುವಾರ ಬಜೆಟ್‌ ಮಂಡಿಸಲಿದ್ದಾರೆ.

2018–19ರ ಬಜೆಟನ್ನು ಅಭಿವೃದ್ಧಿ ಕೇಂದ್ರಿತ ಲೆಕ್ಕಾಚಾರವನ್ನಾಗಿ ಮಾಡಲು ಜೇಟ್ಲಿ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂಬಂತೆ ಕಾಣಿಸುತ್ತಿದೆ. ಅದರ ಜತೆಗೆ, ಎಲ್ಲ ವರ್ಗಗಳ ಜನರಲ್ಲಿ ಒಳ್ಳೆಯ ಭಾವನೆ ಮೂಡಿಸುವ ಹೊಣೆಯನ್ನೂ ಅವರು ಹೊತ್ತಿದ್ದಾರೆ. ನಿರುದ್ಯೋಗ ಸಮಸ್ಯೆಗೆ ಉತ್ತರ ಮತ್ತು ಕೃಷಿ ಕ್ಷೇತ್ರದ ಬಿಕ್ಕಟ್ಟಿಗೆ ಪರಿಹಾರ ಈ ಬಾರಿಯ ಬಜೆಟ್‌ನ ಗಮನ ಕೇಂದ್ರ ಆಗಿರಬಹುದು ಎನ್ನಲಾಗುತ್ತಿದೆ.

ಉದ್ಯೋಗ ಸೃಷ್ಟಿಗೆ ಗರಿಷ್ಠ ಸಾಧ್ಯತೆ ಇರುವ ವಲಯಗಳಲ್ಲಿ ಹೂಡಿಕೆ ಹೆಚ್ಚಿಸುವ ನಿಟ್ಟಿನಲ್ಲಿ ಜೇಟ್ಲಿ ಚಿಂತಿಸಬೇಕಿದೆ. ನಿರ್ಮಾಣ ಮತ್ತು ರಿಯಲ್‌ ಎಸ್ಟೇಟ್‌ ದೇಶದ ಎರಡನೇ ಅತ್ಯಂತ ದೊಡ್ಡ ಉದ್ಯೋಗ ಸೃಷ್ಟಿಯ ವಲಯ. 2016ರ ನೋಟು ರದ್ದತಿಯ ನಂತರ ಈ ಕ್ಷೇತ್ರ ಹೆಚ್ಚು ಸಂಕಷ್ಟದಲ್ಲಿದೆ. ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಯಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ 2014ರ ಬಳಿಕ ದೇಶದಲ್ಲಿ ಸೃಷ್ಟಿಯಾದ ಉದ್ಯೋಗಗಳ ಸಂಖ್ಯೆ ಸುಮಾರು 8.5 ಲಕ್ಷ ಎಂದು ಅಂಕಿ ಅಂಶಗಳು ಹೇಳುತ್ತಿವೆ.

ADVERTISEMENT

ಕೃಷಿ ಕ್ಷೇತ್ರ ದೇಶದಲ್ಲಿ ಅತಿ ಹೆಚ್ಚು ಜನರಿಗೆ ಉದ್ಯೋಗ ಒದಗಿಸಿದೆ. 2022ರ ಹೊತ್ತಿಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳಿಸುವುದು ಕೇಂದ್ರ ಸರ್ಕಾರದ ಕನಸು. ಆದರೆ ಈ ವರ್ಷ (2016–17) ಕೃಷಿ ಕ್ಷೇತ್ರದ ಪ್ರಗತಿ ಶೇ 2.1ಕ್ಕೆ ಇಳಿದಿದೆ. ಕಳೆದ ವರ್ಷ ಇದು ಶೇ 4ರಷ್ಟಿತ್ತು. ಬೇಸಾಯಕ್ಕೆ ಉತ್ತೇಜನ ನೀಡಲು ಜೇಟ್ಲಿ ಅವರು ಸಾಕಷ್ಟು ಹಣ ನೀಡಬೇಕಾಗುತ್ತದೆ. ನೀರಾವರಿ ಮತ್ತು ಬೆಳೆ ವಿಮೆಗೆ ಆದ್ಯತೆ ದೊರೆಬಹುದು ಎಂಬ ನಿರೀಕ್ಷೆ ಇದೆ. ಧಾನ್ಯ ಸಂಗ್ರಹಕ್ಕೆ ಗೋದಾಮು ನಿರ್ಮಿಸುವವರಿಗೆ ಸಹಾಯಧನ ನೀಡುವ ಸಾಧ್ಯತೆ ಇದೆ.

ನಿರೀಕ್ಷೆಗಳು

* ಕಂಪನಿ ತೆರಿಗೆ ಶೇ 30ರಿಂದ ಶೇ 25ಕ್ಕೆ ಇಳಿಕೆ

* ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ

* ಜಿಎಸ್‌ಟಿ ವ್ಯಾಪ್ತಿಗೆ ರಿಯಲ್‌ ಎಸ್ಟೇಟ್‌, ತೈಲ ಸೇರ್ಪಡೆಗೆ ನೀಲ ನಕ್ಷೆ

ಪ್ರಗತಿ ಕುಸಿತ
ನವದೆಹಲಿ (ಪಿಟಿಐ): ಎಂಟು ಮೂಲಸೌಕರ್ಯ ವಲಯಗಳ ಪ್ರಗತಿಯು ಡಿಸೆಂಬರ್‌ ತಿಂಗಳಲ್ಲಿ ಶೇ 4ಕ್ಕೆ ಕುಸಿದಿದ್ದು, ಐದು ತಿಂಗಳ ಹಿಂದಿನ ಮಟ್ಟಕ್ಕೆ ತಲುಪಿದೆ. ಕಲ್ಲಿದ್ದಲು ಮತ್ತು ಕಚ್ಚಾ ತೈಲ ವಲಯದಲ್ಲಿನ ಉತ್ಪಾದನೆ ಕುಸಿತವೇ ಇದಕ್ಕೆ ಕಾರಣವಾಗಿದೆ. ಡಿಸೆಂಬರ್‌ ತಿಂಗಳಲ್ಲಿನ ಈ ವಲಯಗಳ ಉತ್ಪಾದನಾ ಬೆಳವಣಿಗೆಯು 2017ರ ಜುಲೈ ತಿಂಗಳ ನಂತರದ ಅತ್ಯಂತ ಕಡಿಮೆ ಮಟ್ಟದ್ದಾಗಿದೆ. ಜುಲೈನಲ್ಲಿ ಈ ವಲಯಗಳ ಪ್ರಗತಿ ಶೇ 2.9ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.