ADVERTISEMENT

‘ಪದ್ಮಾವತ್‌’ ನನ್ನ ಪಾಲಿಗೆ ಸಂಭ್ರಮವಾಗಿತ್ತು– ದೀಪಿಕಾ

ಪಿಟಿಐ
Published 3 ಫೆಬ್ರುವರಿ 2018, 19:30 IST
Last Updated 3 ಫೆಬ್ರುವರಿ 2018, 19:30 IST
ದೀಪಿಕಾ ಪಡುಕೋಣೆ
ದೀಪಿಕಾ ಪಡುಕೋಣೆ   

ನವದೆಹಲಿ : ’ಪದ್ಮಾವತ್ ಸಿನಿಮಾ ಮಹಿಳಾ ವಿರೋಧಿ ಮತ್ತು ಸತಿ ಪದ್ಧತಿಯನ್ನು ವೈಭವೀಕರಿಸುತ್ತದೆ ಎಂಬ ಚರ್ಚೆ ನಡೆಯುತ್ತಿದೆ. ಆದರೆ, ಭಾರತದ ದುಬಾರಿ ಸಿನಿಮಾವೊಂದರಲ್ಲಿ ಮಹಿಳೆ ಪ್ರಧಾನವಾಗಿರುವುದು ನನ್ನ ಪಾಲಿಗೆ ಸಂಭ್ರಮ ತರುವ ವಿಷಯ’ ಎಂದು  ಪದ್ಮಾವತ್‌ ಪಾತ್ರ ನಿರ್ವಹಿಸಿದ್ದ ದೀಪಿಕಾ ಪಡುಕೋಣೆ ಸಂದರ್ಶನದಲ್ಲಿ ಹೇಳಿದ್ದಾರೆ.

‘ದುಬಾರಿ ಸಿನಿಮಾವೊಂದು ಮಹಿಳಾ ಪ್ರಧಾನವಾಗಿರುವುದು ಮಹಿಳೆಯರು ಸಂಭ್ರಮ ಪಡುವ ವಿಷಯವಾಗಿದೆ. ಇದನ್ನು ಮಹಿಳೆಯರ ಗೆಲುವು ಎಂದು ಭಾವಿಸುತ್ತೇನೆ. ನನಗೆ ಮಾತ್ರವಲ್ಲ , ಈ ಸಿನಿಮಾದಲ್ಲಿ ನಟಿಸಿದ ಎಲ್ಲ ಮಹಿಳೆಯರಿಗೂ ಇದೊಂದು ಸಂಭ್ರಮವಾಗಿದೆ’ ಎಂದು ಹೇಳಿದ್ದಾರೆ.

’ಈ ಸಿನಿಮಾದ ಯಶಸ್ಸು ಇದೇ ತರಹದ ಇನ್ನಷ್ಟು ಸಿನಿಮಾಗಳು ಬರಲು ಬಾಗಿಲು ತೆರೆದಂತಾಗಿದೆ ಎಂದು ನಾನು ನಂಬಿದ್ದೇನೆ. ಮಹಿಳಾಪ್ರದಾನ ಚಿತ್ರಗಳನ್ನು ಮಾತ್ರವಲ್ಲ ಇದೇ ರೀತಿಯ ಕತೆಯಿರುವ ಚಿತ್ರಗಳನ್ನು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣ ಮಾಡಲು ನಿರ್ಮಾಪಕರಿಗೆ ಇದು ಪ್ರೇರಣೆಯಾಗಲಿದೆ’ ಎಂದು ಹೇಳಿದ್ದಾರೆ.

ADVERTISEMENT

ಈ ಚಿತ್ರದಲ್ಲಿ ಸತಿ ಪದ್ಧತಿಯನ್ನು ವೈಭವೀಕರಿಸಿದೆ ಎಂಬ ಆರೋಪಗಳಿಗೆ ಉತ್ತರಿಸಿದ ದೀಪಿಕಾ,’ ಜನರ ಅಭಿಪ್ರಾಯವನ್ನು ನಾನು ಗೌರವಿಸುತ್ತೇನೆ. ಆದರೆ ಒಂದು ಸನ್ನಿವೇಶದ ಮೂಲಕ ಚಿತ್ರವನ್ನು ಸಂಪೂರ್ಣವಾಗಿ ನೋಡಬೇಕು. ಆ ಸನ್ನಿವೇಶ ಯಾವ ಕಾಲಕ್ಕೆ ಸೇರಿದ್ದು ಎಂದು ನೋಡಬೇಕು. ನಾವು ಇಲ್ಲಿ ಕುಳಿತು ಚರ್ಚೆ ಮಾಡಬಹುದು. ಆದರೆ, ಹಿಂದಿನ ಕಾಲದಲ್ಲಿ  ಇಂಥಾ ಆಚರಣೆಗಳಿದ್ದವಲ್ಲಾ? ನಾವು ಈಗ ಅದನ್ನು ಅನುಮೋದಿಸುವುದಿಲ್ಲ’ ಎಂದು ಹೇಳಿದ್ದಾರೆ.

’ಈ ಚಿತ್ರ ನನ್ನ ವೃತ್ತಿ ಬದುಕಿನಲ್ಲಿ ತಿರುವು ತಂದಿದೆ. ಬಾಕ್ಸ್‌ ಆಫೀಸ್‌ ಹಿಟ್‌ ದೊಡ್ಡ ಗೆಲುವು. ಇದಕ್ಕಿಂತ ದೊಡ್ಡ ವಿವಾದಗಳನ್ನು ಎದುರಿಸುವ ಧೈರ್ಯ ನನಗೆ ಬಂದಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.