ADVERTISEMENT

ಗಡಿ ರಸ್ತೆಗೆ ಬಜೆಟ್‌ನಲ್ಲಿ ಆದ್ಯತೆ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2018, 20:23 IST
Last Updated 4 ಫೆಬ್ರುವರಿ 2018, 20:23 IST
ಗಡಿ ರಸ್ತೆಗೆ ಬಜೆಟ್‌ನಲ್ಲಿ ಆದ್ಯತೆ
ಗಡಿ ರಸ್ತೆಗೆ ಬಜೆಟ್‌ನಲ್ಲಿ ಆದ್ಯತೆ   

ನವದೆಹಲಿ: ನೆರೆಯ ಚೀನಾದ ಸವಾಲು ಎದುರಿಸಲು ಭಾರತ ಸಜ್ಜಾಗುತ್ತಿದೆ. ಭಾರತ–ಚೀನಾ ಗಡಿ ಪ್ರದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ 2018–19ರ ಬಜೆಟ್‌ನಲ್ಲಿ ಮಹತ್ವ ನೀಡಲಾಗಿದೆ. ಗಡಿಯಲ್ಲಿ ಸುಮಾರು 197.40 ಕಿ.ಮೀ ರಸ್ತೆ ನಿರ್ಮಾಣಕ್ಕೆ ₹218.32 ಕೋಟಿ ಮೊತ್ತ ಮೀಸಲಿಡಲಾಗಿದೆ.

ಎರಡು ಹಂತದಲ್ಲಿ ಈ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ 97.40 ಕಿ.ಮೀ ರಸ್ತೆ ನಿರ್ಮಾಣವಾಗಲಿದೆ. ಚೀನಾ ಸೇನೆಯ ಅತಿಕ್ರಮಣದ ಸಂದರ್ಭದಲ್ಲಿ ಆ ಪ್ರದೇಶಕ್ಕೆ ಗಡಿ ಕಾಯುವ ಇಂಡೊ–ಟಿಬೆಟನ್‌ ಗಡಿ ಪೊಲೀಸರು (ಐಟಿಬಿಪಿ) ತ್ವರಿತವಾಗಿ ತಲುಪುವುದು ಸಾಧ್ಯವಾಗಲು ಈ ರಸ್ತೆ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಭೂತಾನ್‌ನ ಪಶ್ಚಿಮ ಭಾಗದಲ್ಲಿ ಭಾರತದ ಗಡಿಗೆ ಹೊಂದಿಕೊಂಡಂತೆ ಇರುವ ದೋಕಲಾ ಪ್ರದೇಶದಲ್ಲಿ ಇತ್ತೀಚೆಗೆ ಭಾರತ ಮತ್ತು ಚೀನಾ ಸೇನೆಯ ನಡುವೆ ಸುದೀರ್ಘ ಮುಖಾಮುಖಿ ನಡೆದಿತ್ತು. ಅದರ ಬಳಿಕ ಚೀನಾ ದೇಶವು ಗಡಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿದೆ. ಅದಕ್ಕೆ ಉತ್ತರವಾಗಿ ಭಾರತ ಕೂಡ ಗಡಿ ಮೂಲಸೌಕರ್ಯಕ್ಕೆ ಪ್ರಾಮುಖ್ಯ ನೀಡಲು ನಿರ್ಧರಿಸಿದೆ.

ADVERTISEMENT

ವಾಸ್ತವ ನಿಯಂತ್ರಣ ರೇಖೆಯಲ್ಲಿರುವ ನಿತಿ, ಲಿಪುಲೆಖ್‌, ಥಾಂಗ್‌ ಲಾ 1 ಮತ್ತು ತ್ಸಾಂಗ್‌ ಚೊಕ್‌ ಲಾ ಕಣಿವೆ ಮಾರ್ಗಗಳನ್ನು ಸಂಪರ್ಕಿಸುವ ರಸ್ತೆ ನಿರ್ಮಿಸಬೇಕು ಎಂದು ದೆಹಲಿಯಲ್ಲಿ ಕಳೆದ ಅಕ್ಟೋಬರ್‌ನಲ್ಲಿ ನಡೆದ ಸೇನಾ ಕಮಾಂಡರ್‌ಗಳ ಸಮಾವೇಶದಲ್ಲಿ ನಿರ್ಧರಿಸಲಾಗಿತ್ತು.

ಚೀನಾ ಗಡಿಯ ಜತೆಗೆ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶ ಗಡಿಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೂ ಹಣ ಮೀಸಲು ಇರಿಸಲಾಗಿದೆ.

ಪ್ರಾಯೋಗಿಕ ಯೋಜನೆ: ಪಂಜಾಬ್‌ ಮತ್ತು ಗುಜರಾತಿನಲ್ಲಿ ತಲಾ ₹25 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ನಿಗಾ ವ್ಯವಸ್ಥೆಯನ್ನು ಅಳವಡಿಸಲು ನಿರ್ಧರಿಸಲಾಗಿದೆ. ಇದು ಪ್ರಾಯೋಗಿಕ ನೆಲೆಯದ್ದಾಗಿರುತ್ತದೆ. ಇದರ ಯಶಸ್ಸನ್ನು ನೋಡಿಕೊಂಡು ಇತರೆಡೆಗೂ ಇದನ್ನು ವಿಸ್ತರಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.