ADVERTISEMENT

ರಾಷ್ಟ್ರೀಯ ಸಮಗ್ರತೆಗೆ ಶ್ರಮಿಸಿ: ಯುಜಿಸಿ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2018, 19:30 IST
Last Updated 11 ಫೆಬ್ರುವರಿ 2018, 19:30 IST
ರಾಷ್ಟ್ರೀಯ ಸಮಗ್ರತೆಗೆ ಶ್ರಮಿಸಿ: ಯುಜಿಸಿ
ರಾಷ್ಟ್ರೀಯ ಸಮಗ್ರತೆಗೆ ಶ್ರಮಿಸಿ: ಯುಜಿಸಿ   

ನವದೆಹಲಿ: ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು ರಾಷ್ಟ್ರೀಯ ಸಮಗ್ರತೆಗಾಗಿ ‘ಸಕ್ರಿಯ’ವಾಗಿ ಕೆಲಸ ಮಾಡಬೇಕು ಎಂಬ ಕರಡು ನಿಯಮವನ್ನು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಸಿದ್ಧಪಡಿಸಿದೆ.

ವಿವಿಧ ಸಮುದಾಯಗಳು, ಧರ್ಮಗಳು ಅಥವಾ ಭಾಷಾ ಗುಂಪುಗಳು ನಡುವೆ ದ್ವೇಷ ಬೆಳೆಸುವ ಯಾವುದೇ ಚಟುವಟಿಕೆಗಳನ್ನು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರು ನಡೆಸಬಾರದು ಎಂಬ ಪ್ರಸ್ತಾವವೂ ಈ ಕರಡಿನಲ್ಲಿ ಇದೆ.

ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ಪ್ರಾಧ್ಯಾಪಕ ಮತ್ತು ಇತರ ಶೈಕ್ಷಣಿಕ ಸಿಬ್ಬಂದಿಯ ನೇಮಕಕ್ಕೆ ಕನಿಷ್ಠ ವಿದ್ಯಾರ್ಹತೆಯನ್ನು ಪರಿಷ್ಕರಿಸುವ ಉದ್ದೇಶವನ್ನೂ ಈ ನಿಯಮಗಳು ಹೊಂದಿವೆ.

ADVERTISEMENT

ಉನ್ನತ ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳುವುದಕ್ಕೆ ಸಂಬಂಧಿಸಿಯೂ ಕೆಲವು ಮಾನದಂಡಗಳನ್ನು ಸೇರಿಸಲಾಗಿದೆ.

ರಾಷ್ಟ್ರೀಯ ಪರಂಪರೆ ಮತ್ತು ರಾಷ್ಟ್ರೀಯ ಗುರಿಯನ್ನು ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಲು ಪ್ರಾಧ್ಯಾಪಕರು ನೆರವಾಗಬೇಕು. ವಿದ್ಯಾರ್ಥಿಗಳನ್ನು ವಿದ್ಯಾರ್ಥಿಗಳ ವಿರುದ್ಧ, ಪ್ರಾಧ್ಯಾಪಕರ ವಿರುದ್ಧ ಮತ್ತು ಆಡಳಿತ ಮಂಡಳಿ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಪ್ರಾಧ್ಯಾಪಕರು ಮಾಡಬಾರದು ಎಂಬುದೂ ಕರಡು ನಿಯಮಗಳಲ್ಲಿ ಸೇರಿದೆ.  ಸಮಾಜಕ್ಕೆ ಸಂಬಂಧಿಸಿ ಪ್ರಾಧ್ಯಾಪಕರ ಜವಾಬ್ದಾರಿಗಳೇನು ಎಂಬುದನ್ನೂ ಪ್ರಸ್ತಾವಿತ ನಿಯಮಗಳಲ್ಲಿ ಸೇರಿಸಲಾಗಿದೆ. ಶಿಕ್ಷಣ ನೀಡುವುದು ಸಾರ್ವಜನಿಕ ಸೇವೆ ಎಂದು ಭಾವಿಸಬೇಕು. ತಮ್ಮ ಸಂಸ್ಥೆಯು ನೀಡುತ್ತಿರುವ ಶಿಕ್ಷಣ ಸೇವೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು, ಸಮುದಾಯದಲ್ಲಿ ಶಿಕ್ಷಣದ ಮಟ್ಟ ಹೆಚ್ಚಿಸುವುದು ಮತ್ತು ಸಮುದಾಯದ ನೈತಿಕ ಹಾಗೂ ಭೌದ್ಧಿಕ ನೆಲೆಯನ್ನು ಹೆಚ್ಚಿಸುವುದು ಪ್ರಾಧ್ಯಾಪಕರ ಕೆಲಸದ ಭಾಗವಾಗಿದೆ ಎಂದು ಹೇಳಲಾಗಿದೆ.

ಇದಲ್ಲದೆ, ಸಾಮಾಜಿಕ ಸಮಸ್ಯೆಗಳೇನು ಎಂಬುದನ್ನು ಅವರು ಅರಿತಿರಬೇಕು. ಈ ಸಮಸ್ಯೆಗಳನ್ನು ಪರಿಹರಿಸುವ ಕೆಲಸಗಳಲ್ಲಿ ಭಾಗಿಯಾಗಬೇಕು. ಆ ಮೂಲಕ ಇಡೀ ದೇಶದ ಪ್ರಗತಿಗೆ ಶ್ರಮಿಸಬೇಕು ಎಂಬುದು ಪ್ರಸ್ತಾವಿತ ನಿಯಮಗಳಾಗಿವೆ.

ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ ಸೇರಿ ದೇಶದ ವಿವಿಧ ವಿಶ್ವವಿದ್ಯಾಲಯಗಳ ಕೆಲವು ಪ್ರಾಧ್ಯಾಪಕರ ಮತ್ತಿ ಆಡಳಿತ ಮಂಡಳಿ ನಡುವೆ ಭಾರಿ ಭಿನ್ನಾಭಿಪ್ರಾಯ ವ್ಯಕ್ತವಾಗಿರುವ ಸಂದರ್ಭದಲ್ಲಿಯೇ ಹೊಸ ನಿಯಮಗಳನ್ನು ಯುಜಿಸಿ ಸಿದ್ಧಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.