ADVERTISEMENT

ತ್ರಿಪುರಾದಲ್ಲಿ ಶೇ 76 ಮತದಾನ

ಮಾರ್ಚ್‌ 3ರಂದು ಮತ ಎಣಿಕೆ; ರಾಜ್ಯದಲ್ಲಿ 25 ವರ್ಷಗಳಿಂದ ಅಧಿಕಾರದಲ್ಲಿರುವ ಸಿಪಿಎಂ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2018, 19:30 IST
Last Updated 18 ಫೆಬ್ರುವರಿ 2018, 19:30 IST
ತ್ರಿಪುರಾದಲ್ಲಿ ಶೇ 76 ಮತದಾನ
ತ್ರಿಪುರಾದಲ್ಲಿ ಶೇ 76 ಮತದಾನ   

ನವದೆಹಲಿ: ತ್ರಿಪುರಾ ವಿಧಾನಸಭೆಗೆ ಭಾನುವಾರ ಚುನಾವಣೆ ನಡೆದಿದ್ದು ಶೇ 76ಕ್ಕೂ ಹೆಚ್ಚು ಮತದಾನವಾಗಿದೆ. ರಾಜ್ಯದಲ್ಲಿ 25 ವರ್ಷಗಳಿಂದ ಸಿಪಿಎಂ ಅಧಿಕಾರದಲ್ಲಿದೆ. ರಾಜ್ಯದ ಮತದಾರರ ಸಂಖ್ಯೆ 25.7 ಲಕ್ಷ.

ಮತದಾನ ಶಾಂತಿಯುತವಾಗಿ ನಡೆಯಿತು. ಎರಡು ಕಚ್ಚಾಬಾಂಬ್‌ಗಳು ಪತ್ತೆಯಾದರೂ ಅವುಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

‘41 ಕ್ಷೇತ್ರಗಳ ಮತದಾನದ ವಿವರ ಮಾತ್ರ ಸಂಪೂರ್ಣವಾಗಿ ಲಭ್ಯವಾಗಿದೆ. ಹಾಗಾಗಿ ಮತದಾನದ ಪ್ರಮಾಣ ಇನ್ನೂ ಹೆಚ್ಚಬಹುದು’ ಎಂದು ಆಯೋಗ ಹೇಳಿದೆ. ಮೇಘಾಲಯ ಮತ್ತು ನಾಗಾಲ್ಯಾಂಡ್‌ನಲ್ಲಿಯೂ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಮೂರೂ ರಾಜ್ಯಗಳಲ್ಲಿ ಮಾರ್ಚ್‌ 3ರಂದು ಮತ ಎಣಿಕೆ ಮಾಡಲಾಗುವುದು.

ADVERTISEMENT

ಮತಯಂತ್ರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಹಲವು ದೂರುಗಳು ಬಂದಿದ್ದವು. ಆದರೆ ಅವುಗಳ ಪೈಕಿ ಹೆಚ್ಚಿನವುಗಳಲ್ಲಿ ಯಾವುದೇ ಸತ್ಯ ಇರಲಿಲ್ಲ. 12 ಮತಗಟ್ಟೆಗಳ ಮತಯಂತ್ರಗಳನ್ನು ಬದಲಾಯಿಸಲಾಗಿದೆ. ಎಲ್ಲ ಮತಗಟ್ಟೆಗಳಲ್ಲಿಯೂ ಮತದಾರರ ಮತ ದೃಢೀಕರಣ ಯಂತ್ರ (ವಿವಿಪಿಎಟಿ) ಬಳಸಲಾಗಿತ್ತು.

ರಾಜ್ಯದಲ್ಲಿ ಒಟ್ಟು 60 ಕ್ಷೇತ್ರಗಳಿದ್ದು 59 ಕ್ಷೇತ್ರಗಳಲ್ಲಿ ಮಾತ್ರ ಮತದಾನ ನಡೆಯಿತು. ಚಾರ್‌ಲಿಯಂ ಕ್ಷೇತ್ರದ ಸಿಪಿಎಂ ಅಭ್ಯರ್ಥಿ ರಾಮೇಂದ್ರ ನಾರಾಯಣ್‌ ಅವರು ಮತದಾನದ ದಿನಕ್ಕೆ ಒಂದು ವಾರ ಮೊದಲು ನಿಧನರಾದ ಕಾರಣ ಈ ಕ್ಷೇತ್ರದ ಮತದಾನವನ್ನು ಮುಂದೂಡಲಾಗಿದೆ.

ತ್ರಿಪುರಾದಲ್ಲಿ ಅಧಿಕಾರದಲ್ಲಿರುವ ಮಾಣಿಕ್‌ ಸರ್ಕಾರ್‌ ನೇತೃತ್ವದ ಸರ್ಕಾರಕ್ಕೆ ಇದು ಮಹತ್ವದ ಚುನಾವಣೆ. ಈಗ ಸಿಪಿಎಂ 50 ಸ್ಥಾನಗಳನ್ನು ಹೊಂದಿದೆ. ಆದರೆ ಈ ಬಾರಿ ‘ಬದಲಾಯಿಸೋಣ’ ಎಂಬ ಘೋಷಣೆಯೊಂದಿಗೆ ಬಿಜೆಪಿ ಭರದ ಪ್ರಚಾರ ನಡೆಸಿತ್ತು.

ಗೆಲುವು ಖಚಿತ ಎಂಬ ವಿಶ್ವಾಸವನ್ನು ಸಿಪಿಎಂ ವ್ಯಕ್ತಪಡಿಸಿದೆ. ಆದರೆ ಸ್ಪರ್ಧೆ ಕಠಿಣವಾಗಿತ್ತು ಎಂಬುದನ್ನು ಒಪ್ಪಿಕೊಂಡಿದೆ.

ಇಂಡಿಜಿನಸ್‌ ಪೀಪಲ್ಸ್‌ ಫ್ರಂಟ್‌ ಆಫ್‌ ತ್ರಿಪುರಾ (ಐಪಿಎಫ್‌ಟಿ) ಜತೆಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಕಾಂಗ್ರೆಸ್‌ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಹಾಗಾಗಿ ಬಿಜೆಪಿ ಮೈತ್ರಿಕೂಟ ಮತ್ತು ಸಿಪಿಎಂ ನಡುವೆ ನೇರ ಸ್ಪರ್ಧೆ ಇತ್ತು.

ಬುಡಕಟ್ಟು ಸಮುದಾಯಕ್ಕೆ ಮೀಸಲಾದ 20 ಕ್ಷೇತ್ರಗಳಲ್ಲಿ ಸಿಪಿಎಂ ಕಳೆದ ಬಾರಿ ಗೆದ್ದಿತ್ತು. ಈ ಬಾರಿ ಇಲ್ಲಿನ 11 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿದೆ. ಉಳಿದ 9 ಕ್ಷೇತ್ರಗಳನ್ನು ಮಿತ್ರಪಕ್ಷ ಐಪಿಎಫ್‌ಟಿಗೆ ಬಿಟ್ಟು ಕೊಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.