ADVERTISEMENT

ಬಿಜೆಪಿಗಿಂತಲೂ ಅಸ್ಸಾಂನ ಎಐಯುಡಿಎಫ್ ವೇಗವಾಗಿ ಬೆಳೆಯುತ್ತಿದೆ: ಸೇನಾ ಮುಖ್ಯಸ್ಥ ಹೇಳಿಕೆ

ಏಜೆನ್ಸೀಸ್
Published 22 ಫೆಬ್ರುವರಿ 2018, 11:46 IST
Last Updated 22 ಫೆಬ್ರುವರಿ 2018, 11:46 IST
ಸೇನಾ ಮುಖ್ಯಸ್ಥ ಬಿಪಿನ್ ರಾವತ್ (ಸಂಗ್ರಹ ಚಿತ್ರ)
ಸೇನಾ ಮುಖ್ಯಸ್ಥ ಬಿಪಿನ್ ರಾವತ್ (ಸಂಗ್ರಹ ಚಿತ್ರ)   

ನವದೆಹಲಿ: ಬಿಜೆಪಿಗಿಂತಲೂ ಅಸ್ಸಾಂನ ರಾಜಕೀಯ ಪಕ್ಷವಾದ ‘ಆಲ್‌ ಇಂಡಿಯಾ ಯುನೈಟೆಡ್‌ ಡೆಮಾಕ್ರಟಿಕ್‌ ಫ್ರಂಟ್‌‘ (ಎಐಯುಡಿಎಫ್) ವೇಗವಾಗಿ ಬೆಳೆಯುತ್ತಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಬುಧವಾರ ಹೇಳಿರುವುದನ್ನು ಸೇನೆ ಸಮರ್ಥಿಸಿಕೊಂಡಿದೆ.

‘ರಾವತ್ ಹೇಳಿಕೆಯಲ್ಲಿ ಯಾವುದೇ ಧಾರ್ಮಿಕ ಅಥವಾ ರಾಜಕೀಯ ಉದ್ದೇಶ ಇಲ್ಲ. ಈಶಾನ್ಯ ಪ್ರದೇಶದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆಯಷ್ಟೇ ಮಾತನಾಡಿದ್ದಾರೆ’ ಎಂದು ಸೇನೆ ಸ್ಪಷ್ಟಪಡಿಸಿದೆ.

ಈಶಾನ್ಯ ಪ್ರದೇಶದಲ್ಲಿ ಜನ ಸಾಮಾನ್ಯರ ಮತ್ತು ಸೇನೆಯ ನಡುವಣ ಅಂತರ ಕಡಿಮೆಗೊಳಿಸುವ ಹಾಗೂ ಭದ್ರತಾ ಗಡಿಗಳ ವಿಷಯದ ಬಗ್ಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ರಾವತ್‌ ಎಐಯುಡಿಎಫ್ ಕುರಿತ ಹೇಳಿಕೆ ನೀಡಿದ್ದರು.

ADVERTISEMENT

ಅಸ್ಸಾಂನ ಕೆಲ ಜಿಲ್ಲೆಗಳಲ್ಲಿ ಮುಸ್ಲಿಮರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ ಎಂಬ ವರದಿಯನ್ನು ಆಧರಿಸಿ ಮಾತನಾಡಿದ್ದ ರಾವತ್, ‘ಭಾರತ ಮೇಲೆ ಚೀನಾದ ನೆರವಿನೊಂದಿಗೆ ಪಾಕಿಸ್ತಾನ ಪರೋಕ್ಷ ಯುದ್ಧ ಸಾರುತ್ತಿದೆ. ಬಾಂಗ್ಲಾದೇಶದ ಗಡಿಯಲ್ಲಿರುವ ಅಸ್ಸಾಂಗೆ ಈ ಮೂಲಕ ಅಕ್ರಮ ಬಾಂಗ್ಲಾದೇಶೀಯರನ್ನು ರವಾನೆ ಮಾಡಿ ಈ ಪ್ರಾಂತ್ಯದಲ್ಲಿ ಅಶಾಂತಿಯನ್ನುಂಟುಮಾಡುತ್ತಿದೆ’ ಎಂದು ಹೇಳಿದ್ದರು.

‘ಈಶಾನ್ಯ ಗಡಿಯಲ್ಲಿ ಬಾಂಗ್ಲಾದೇಶದ ಅಕ್ರಮ ವಲಸಿಗರು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದ್ದಾರೆ. ಎಐಯುಡಿಎಫ್ ಎಂಬ ಪಕ್ಷ ಇಂತಹ ಅಕ್ರಮ ವಲಸಿಗರ ನೆರವಿಗೆ ನಿಂತಿದೆ. ಇದನ್ನು ಗಮನಿಸಿದರೆ 1980ರಲ್ಲಿ ಬಿಜೆಪಿ ಬೆಳೆದ ವೇಗಕ್ಕಿಂತಲೂ ವೇಗವಾಗಿ ಈ ಪಕ್ಷ ಬೆಳೆಯುತ್ತಿದೆ’ ಎಂದು ರಾವತ್ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.