ADVERTISEMENT

6 ದಿನದಲ್ಲಿ ಹಿಮಾಲಯದ 3 ಶಿಖರಾರೋಹಣ: ಅನ್ಶು ದಾಖಲೆ

​ಪ್ರಜಾವಾಣಿ ವಾರ್ತೆ
Published 30 ಮೇ 2014, 10:14 IST
Last Updated 30 ಮೇ 2014, 10:14 IST

ಇಟಾನಗರ (ಪಿಟಿಐ): ಅರುಣಾಚಲದ ಮಹಿಳಾ ಪರ್ವತಾರೋಹಿ ಅನ್ಶು ಜಮ್ಸೆನ್ಪಾ ಅವರು ಹಿಮಾಲಯ ಪರ್ವತ ಶ್ರೇಣಿಯ ಮೂರು ಶಿಖರಗಳನ್ನು ಆರು ದಿನಗಳ ಅವಧಿಯಲ್ಲಿ ಸತತವಾಗಿ ಏರುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ. ತಮ್ಮ ಹಿಂದಿನ ಎವರೆಸ್ಟ್ ಶಿಖರಾರೋಹಣ ದಾಖಲೆ ಬಳಿಕ ಅವರು ಈ ಸಾಹಸ ಮೆರೆದಿದ್ದಾರೆ.

ಇಬ್ಬರು ಮಕ್ಕಳ ತಾಯಿಯಾದ ಅನ್ಶು ತಮ್ಮ ಪರ್ವತಾರೋಹಣ ಸಾಹಸದ ಅವಧಿಯಲ್ಲಿ ಲೊಬುಚೆ (6119 ಮೀಟರ್), ಪೊಖಾಲ್ಡೆ (5896 ಮೀಟರ್) ಮತ್ತು ಐಲ್ಯಾಂಡ್ (6189 ಮೀಟರ್) ಶಿಖರಗಳನ್ನು ಮೇ 13ರಿಂದ 18ರವರೆಗಿನ ಅವಧಿಯಲ್ಲಿ ಏರಿದ್ದಾರೆ.

ಈ ಅಪೂರ್ವ ಸಾಧನೆಗಾಗಿ ನೇಪಾಳದ ಸಂಸ್ಕೃತಿ, ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಸಚಿವಾಲಯವು ಮೇ 27ರಂದು ಕಠ್ಮಂಡುವಿನ ಸಿಂಘಾ ದರ್ಬಾರಿನಲ್ಲಿ ಅವರನ್ನು ಸನ್ಮಾನಿಸಿದೆ.

ತಮ್ಮ ಜೊತೆಗಿದ್ದ ಸಹ ಪರ್ವತಾರೋಹಿಗಳು ಮೂರು ಪರ್ವತಾರೋಹಣ ಸಾಹಸದಲ್ಲಿ ಮೊದಲ ಶಿಖರಾರೋಹಣದ ಬಳಿಕ ವಾಪಸಾಗಿ ತಮ್ಮ ರಾಷ್ಟ್ರಗಳನ್ನು ಸೇರಿಕೊಂಡರೆ ಅನ್ಶು ಮಾತ್ರ ಪ್ರತಿಕೂಲ ಹವಾಮಾನ, 16 ಮಂದಿ ಶೆರ್ಪಾಗಳನ್ನು ಬಲಿ ತೆಗೆದುಕೊಂಡ ಹಿಮ ಪ್ರವಾಹದ ಅಡ್ಡಿಗಳಿಗೆ ಎದೆಯೊಡ್ಡಿ ಮುಂದುವರಿದು ಸಾಹಸ ಮೆರೆದರು.

ಬೊಮ್ಡಿಲಾ ಪ್ರದೇಶದ ಮೊನ್ಪಾ ಪ್ರದೇಶಕ್ಕೆ ಸೇರಿದ ಅನ್ಶು, ಈ ಮುನ್ನ ವಿಶ್ವದ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ ಶಿಖರವನ್ನು 10 ದಿನಗಳ ಅವಧಿಯಲ್ಲಿ ಎರಡು ಬಾರಿ ಏರುವ ಮೂಲಕ ಈ ಸಾಹಸಗೈದ ಮೊತ್ತ ಮೊದಲ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.