ADVERTISEMENT

ಆಂಧ್ರ, ಕರ್ನಾಟಕ, ತಮಿಳುನಾಡು ಪೊಲೀಸರ 6 ತಿಂಗಳ ಕಾರ್ಯಾಚರಣೆ ಬಳಿಕ ಉಗ್ರರ ಸೆರೆ

ಏಜೆನ್ಸೀಸ್
Published 11 ಜುಲೈ 2025, 16:46 IST
Last Updated 11 ಜುಲೈ 2025, 16:46 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಎ.ಐ ಚಿತ್ರ

ಚೆನ್ನೈ: ‘ಆಂಧ್ರಪ್ರದೇಶ, ಕರ್ನಾಟಕ ಪೊಲೀಸರ ಜೊತೆಗೂಡಿ ಕಳೆದ ಆರು ತಿಂಗಳ ಕಾಲ ಕಾರ್ಯಾಚರಣೆಯ ಬಳಿಕವೇ ಮೂವರು ಶಂಕಿತಉಗ್ರರನ್ನು ಬಂಧಿಸಲಾಗಿದೆ’ ಎಂದುತಮಿಳುನಾಡು ಪೊಲೀಸ್‌ ಮಹಾ ನಿರ್ದೇಶಕ ಶಂಕರ್‌ ಜಿವಾಳ್ ತಿಳಿಸಿದ್ದಾರೆ.

ADVERTISEMENT

‘ಕೃತ್ಯ ನಡೆದು ಮೂರು ದಶಕದ ಬಳಿಕ ಪೊಲೀಸರು ಸತತ ಹುಡುಕಾಟ ನಡೆಸಿ ಅಬೂಬಕ್ಕರ್‌ ಸಿದ್ದಿಕಿ, ಮೊಹಮ್ಮದ್‌ ಅಲಿ ಹಾಗೂ ಸಾದಿಕ್‌ ರಾಜಾ ಅಲಿಯಾಸ್‌ ಟೈಲರ್‌ ರಾಜಾನನ್ನು ಬಂಧಿಸಿದರು’ ಎಂದು ಇಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

1998ರಲ್ಲಿ ಕೊಯಮತ್ತೂರಿ ನಲ್ಲಿ ನಡೆದಿದ್ದ ಸರಣಿ ಬಾಂಬ್‌ ಸ್ಫೋಟ ಪ್ರಕರಣದಲ್ಲಿ 58 ಮಂದಿ ಮೃತಪಟ್ಟು, 250ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. 2013ರಲ್ಲಿ ಮಲ್ಲೇಶ್ವರದಲ್ಲಿ ನಡೆದಿದ್ದ ಬಾಂಬ್‌ ಸ್ಫೋಟದಲ್ಲಿಯೂ ಈ ಆರೋಪಿಗಳು ಭಾಗಿಯಾಗಿದ್ದರು.

‘ಕೃತ್ಯವೆಸಗಿ, ನಾಪತ್ತೆಯಾದವರನ್ನು ಬಂಧಿಸಲು ಎರಡು ರಾಜ್ಯಗಳ ಪೊಲೀಸರ ನೆರವಿನೊಂದಿಗೆ ‘ಆರಾಮ್‌’ ಹಾಗೂ ‘ಅಗಾಚಿ’ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಸಿದ್ದಿಕಿಯನ್ನು ಆಂಧ್ರಪ್ರದೇಶದ ಕಡಪಾ ದಲ್ಲಿ ಬಂಧಿಸಿದ್ದು, ಸಾದೀಕ್‌ನನ್ನು ಕರ್ನಾಟಕದ ವಿಜಯಪುರದಲ್ಲಿ ಬಂಧಿಸ ಲಾಗಿದೆ. ಭಯೋತ್ಪಾದಕ ನಿಗ್ರಹ ಪಡೆಯು(ಎಟಿಎಸ್‌) ಅತ್ಯಂತ ಯಶಸ್ವಿ ಕಾರ್ಯಾಚ ರಣೆ ನಡೆಸಿದೆ’ ಎಂದು ತಿಳಿಸಿದರು.

‘ಸಿದ್ದಿಕಿಯನ್ನು ಬಂಧಿಸಲು ತಮಿಳುನಾಡು ಗುಪ್ತಚರ ಇಲಾಖೆ, ಎಟಿಎಸ್‌ ಸಹಯೋಗದಲ್ಲಿ ಕೊಯಮತ್ತೂರಿನ ಪೊಲೀಸರು ಆರು ತಿಂಗಳ ಹಿಂದೆಯೇ ‘ಆಪರೇಷನ್‌ ಆರಾಮ್‌’ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದ್ದರು. ಹಲವು ಬಾಂಬ್‌ ಸ್ಫೋಟ ಹಾಗೂ ಕೋಮು ಕೊಲೆ ಪ್ರಕರಣಗಳಲ್ಲಿ ಆತ ಭಾಗಿಯಾಗಿದ್ದ. ದಕ್ಷಿಣ ಭಾರತದಲ್ಲಿ ಕುಕೃತ್ಯವೆಸಗಿ, 30 ವರ್ಷಗಳಿಂದಲೂ ನಾಪತ್ತೆಯಾಗಿದ್ದ. ಯೌವನದ ಫೋಟೋಗಳು ದೊರೆಯದ ಕಾರಣ, ಪತ್ತೆಹಚ್ಚುವುದುಕೂಡ ಸವಾಲಾಗಿತ್ತು’ ಎಂದು ತಿಳಿಸಿದ್ದಾರೆ.

‘ಬೇರೆ ಹೆಸರುಗಳ ಮೂಲಕ, ಸ್ಥಳಗಳನ್ನು ಬದಲಾಯಿಸಿ, ಬೇರೆ ಕೆಲಸಗಳನ್ನು ಮಾಡುತ್ತಿದ್ದ ಸಿದ್ದಿಕಿ, ಅತ್ಯುತ್ತಮ ಮಟ್ಟದ ಕಚ್ಚಾಬಾಂಬ್‌ಗಳನ್ನು ತಯಾರಿಸುವಲ್ಲಿ ನಿಷ್ಣಾತನಾಗಿದ್ದ’ ಎಂದು ಜಿವಾಲ್‌ ಹೇಳಿದ್ದಾರೆ.

‘ಮಾನವ ಹಾಗೂ ತಂತ್ರಜ್ಞಾನದ ಗುಪ್ತಚರ ಮಾಹಿತಿ ಆಧರಿಸಿ ಕಡಪಾದ ರಾಯಚೋಟಿಯಲ್ಲಿ ಸಿದ್ದಿಕಿಯನ್ನು ಬಂಧಿಸಿದ್ದು, ತದನಂತರ ಅಲಿಯನ್ನು ಬಂಧಿಸಲಾಯಿತು’ ಎಂದರು.

ಆಪರೇಷನ್‌ ಆಗಾಚಿ: ‘ಸಾದೀಕ್‌ ಅಲಿಯಾಸ್‌ ಟೈಲರ್ ರಾಜಾನ ಬಂಧನಕ್ಕೆ ‘ಆಪರೇಷನ್‌ ಆಗಾಚಿ’ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. 1998ರ ಸರಣಿ ಕೊಯಮತ್ತೂರು ಸರಣಿ ಬಾಂಬ್‌ ಸ್ಫೋಟ ಸೇರಿದಂತೆ, ನಾಲ್ಕು ಸೂಕ್ಷ್ಮ ಪ್ರಕರಣಗಳಲ್ಲಿ ಈತ ಬೇಕಾಗಿದ್ದ. ಕಳೆದ 29 ವರ್ಷಗಳಿಂದ ಪತ್ತೆಯಾಗಿರಲಿಲ್ಲ. ಯೌವನವಸ್ಥೆಯ ಚಿತ್ರಗಳು ಇರಲಿಲ್ಲ. ಸ್ನೇಹಿತರು, ಕುಟುಂಬ ಸದಸ್ಯರ ಜೊತೆಗೆ ಸಂಪರ್ಕ ಹೊಂದಿರಲಿಲ್ಲ. ಜುಲೈ 9ರಂದು ವಿಜಯಪುರದಲ್ಲಿ ಬಂಧಿಸಿ, ಕೊಯಮತ್ತೂರಿಗೆ ಕರೆತರಲಾಗಿದೆ.

ರಿಯಲ್‌ ಎಸ್ಟೇಟ್‌ ವ್ಯಾಪಾರಿಗಳು

‘ಬಂಧಿತರು ದಿನಸಿ ಅಂಗಡಿ, ಟೈಲರಿಂಗ್‌ ಶಾಪ್‌, ರಿಯಲ್‌ ಎಸ್ಟೇಟ್‌ ವ್ಯಾಪಾರ ನಡೆಸುತ್ತಿದ್ದರು. ಕೆಲವೊಂದು ಮಾನದಂಡಗಳನ್ನು ಅನುಸರಿಸಿಯೇ ಪೊಲೀಸರು ಅವರನ್ನು ಬಂಧಿಸಿದ್ದಾರೆ. ವಶಕ್ಕೆ ಪಡೆದ 24 ತಾಸಿನ ಒಳಗಾಗಿ, ಅವರ ಗುರುತು ಖಚಿತಪಡಿಸಲಾಗಿದೆ’ ಎಂದು ಪೊಲೀಸ್‌ ಮಹಾನಿರ್ದೇಶಕ ಶಂಕರ್‌ ಜಿವಾಳ್ ಸ್ಪಷ್ಟಪಡಿಸಿದರು.

‘ಸಿದ್ದಿಕಿಯು ನಿಷೇಧಿತ ಯಾವುದೇ ಸಂಘಟನೆಗಳ ಜೊತೆ ಸಂಪರ್ಕ ಹೊಂದಿಲ್ಲ. ಸಾದೀಕ್‌ ನಿಷೇಧಿತ ಅಲ್‌–ಉಮ್ಮಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ. ವಿವಿಧ ಹಂತಗಳಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ವಿದೇಶಕ್ಕೆ ತೆರಳಿರುವ ಸಾಧ್ಯತೆಯ ಕುರಿತು ವಿವರ ಪಡೆಯಲಾಗುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.