ADVERTISEMENT

ವಿಧಾನಸಭೆ ಸ್ಪೀಕರ್‌ ಆದೇಶದ ಬಳಿಕ ಶಿವಸೇನಾ ಬಣಗಳ ನಡುವೆ ವಾಕ್ಸಮರ ತೀವ್ರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2024, 16:28 IST
Last Updated 11 ಜನವರಿ 2024, 16:28 IST
ಶಿವಸೇನಾ ಲೋಗೊ
ಶಿವಸೇನಾ ಲೋಗೊ   

ಮುಂಬೈ: ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾವೇ ‘ನಿಜವಾದ ಶಿವಸೇನಾ’ ಎಂದು ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್‌ ರಾಹುಲ್ ನರ್ವೇಕರ್‌ ಆದೇಶ ನೀಡಿದ ಬಳಿಕ ಶಿವಸೇನಾದ ಎರಡು ಬಣಗಳ ನಡುವಣ ವಾಕ್ಸಮರವು ತೀವ್ರಗೊಂಡಿದೆ.

ರಾಜಕೀಯ ಪಕ್ಷವನ್ನು ‘ಖಾಸಗಿ ಕಂಪನಿ’ಯಂತೆ ನಡೆಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದಲ್ಲಿ ಸಂಖ್ಯಾಬಲಕ್ಕೆ ಮತ್ತು ಜನರ ಇಚ್ಛೆಗೆ ಮಹತ್ವವಿದೆ ಎಂದು ಶಿಂದೆ ಅವರು ಆದೇಶ ಕುರಿತು ಹೇಳಿದ್ದರು.

ಮಹಾರಾಷ್ಟ್ರದಲ್ಲಿ ಸ್ಥಿರ ಸರ್ಕಾರ ಮುಂದುವರೆಯಲಿದೆ ಮತ್ತು ಅದು ಅವಧಿಯನ್ನು ಪೂರ್ಣಗೊಳಿಸುತ್ತದೆ ಎಂಬುದನ್ನು ಈ ತೀರ್ಪು ಪ್ರತಿಬಿಂಬಿಸಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಅವರು ಆದೇಶದ ಬಗ್ಗೆ ಪ್ರತಿಕ್ರಿಯಿಸಿದ್ದರು.

ADVERTISEMENT

ಇತ್ತ,  ಸ್ಪೀಕರ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ (ಯುಬಿಟಿ) ಸಿದ್ಧತೆ ಮಾಡಿಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಪೂರ್ವತಯಾರಿ ಮಾಡಿಕೊಳ್ಳುವ  ನಿಟ್ಟಿನಲ್ಲಿ  ಠಾಕ್ರೆ ಕುಟುಂಬದ ಆಪ್ತ, ಪಕ್ಷದ ಎಂಎಲ್‌ಸಿ ಅನಿಲ್‌ ಪರಬ್‌ ಅವರು ದೆಹಲಿಗೆ ತೆರಳಿ ವಕೀಲರನ್ನು ಜೊತೆ ಚರ್ಚೆ ನಡೆಸುತ್ತಿದ್ದಾರೆ.

‘ರಾಜ್ಯ ವಿಧಾನಸಭೆಯ ಉಪಚುನಾವಣೆ ವೇಳೆಯೇ ನಮ್ಮ ಬಣಗಳ ಹೆಸರುಗಳನ್ನು ಅಂತಿಮ ಮಾಡಿಕೊಳ್ಳಬೇಕಿತ್ತು. ನಾವು ಬಾಳಾಸಾಹೇಬಾಂಚಿ ಶಿವಸೇನಾ ಎಂಬ ಹೆಸರನ್ನು ಅಂತಿಮಗೊಳಿಸಿದೆವು. ಉದ್ಧವ್‌ ಅವರು ಶಿವಸೇನಾ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಎಂಬ ಹೆಸರು ಆರಿಸಿಕೊಂಡರು. ಬಾಳಾಸಾಹೇಬರ ಮೇಲೆ ಯಾರಿಗೆ ಎಷ್ಟು ಗೌರವವಿದೆ ಎಂಬುದು ಇದರಿಂದಲೇ ತಿಳಿಯುತ್ತದೆ’ ಎಂದು ಶಿಂದೆ ಸುದ್ದಿಗಾರರ ಎದುರು ಹೇಳಿದ್ದಾರೆ.

ಠಾಣೆಯ ಆನಂದ ಆಶ್ರಮಕ್ಕೆ ಭೇಟಿ ನೀಡಿದ ಅವರು, ಶಿವಸೇನಾ ಸಂಸ್ಥಾಪಕ ಬಾಳಾಸಾಹೇಬ್‌ ಠಾಕ್ರೆ ಮತ್ತು ತಮ್ಮ ಮಾರ್ಗದರ್ಶಿ ‘ಧರ್ಮವೀರ’ ಆನಂದ್‌ ದಿಘೆ ಅವರಿಗೆ ಗೌರವ ಸಲ್ಲಿಸಿದರು.  

ಸಿಬಲ್‌ ಅಸಮಾಧಾನ: ಇದೇವೇಳೆ ನಾರ್ವೇಕರ್‌ ಆದೇಶವನ್ನು ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಟೀಕಿಸಿದ್ದಾರೆ. ಶಿಂದೆ ಪರ ತೀರ್ಪು ನೀಡಿದ ನಾಟಕದ ಕಥೆಯನ್ನು ತುಂಬಾ ದಿನಗಳ ಹಿಂದೆಯೇ ಬರೆಯಲಾಗಿದೆ. ಯಾರ ನೆರವೂ ಇಲ್ಲದೇ ಪ್ರಹಸನ ನಡೆಯುತ್ತಿರುವುದನ್ನು ನಾವು ಈಗ ನೋಡುತ್ತಿದ್ದೇವೆ. ಇದು ‘ಪ್ರಜಾಪ್ರಭುತ್ವದ ತಾಯಿ’ಯ ದುರಂತ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.