ADVERTISEMENT

60ಕ್ಕೂ ಹೆಚ್ಚು ಕಡೆ ಸಿಬಿಐ ದಾಳಿ

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 19:30 IST
Last Updated 4 ಜನವರಿ 2012, 19:30 IST

ನವದೆಹಲಿ (ಪಿಟಿಐ): ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಯೋಜನೆಯ(ಎನ್‌ಆರ್‌ಎಚ್‌ಎಂ) ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮಾಜಿ ಸಚಿವ ಬಾಬು ಸಿಂಗ್ ಕುಶ್ವಾ ಅವರ ಲಖನೌ ನಿವಾಸ ಒಳಗೊಂಡು, 60ಕ್ಕೂ ಹೆಚ್ಚು ಸ್ಥಳಗಳಲ್ಲಿ ಸಿಬಿಐ ಬುಧವಾರ ಶೋಧ ನಡೆಸಿತು.

ಹಗರಣದ ಆರೋಪಿ ಮತ್ತು ಈಚೆಗೆ ಬಿಎಸ್‌ಪಿಯಿಂದ ಉಚ್ಚಾಟಿತರಾಗಿದ್ದ ಕುಶ್ವಾ ಅವರು ಬಿಜೆಪಿ ಸೇರಿದ ಮರುದಿನವೇ ಈ ದಾಳಿ ನಡೆದಿದೆ. ಉತ್ತರ ಪ್ರದೇಶ ಮಾತ್ರವಲ್ಲದೆ ದೆಹಲಿ, ಹರಿಯಾಣ ಮತ್ತಿತರ ಪ್ರದೇಶಗಳಲ್ಲಿಯೂ ಶೋಧ ನಡೆಸಲಾಗಿದೆ.

ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಬಿಜೆಪಿ, `ಈ ಕ್ರಮದ ಹಿಂದೆ ಕಾಂಗ್ರೆಸ್ ಮತ್ತು ಬಿಎಸ್‌ಪಿ ಕೈವಾಡ ಇದೆ~ ಎಂದು ಟೀಕಿಸಿದೆ. `ಈವರೆಗೂ ಸುಮ್ಮನಿದ್ದ ತನಿಖಾ ಸಂಸ್ಥೆ, ಕುಶ್ವಾ ಅವರು ಬಿಜೆಪಿ ಸೇರುತ್ತಿದ್ದಂತೆಯೇ ದಾಳಿಗೆ ಮುಂದಾಗಿರುವುದು ಶಂಕೆ ಮೂಡಿಸಿದೆ~ ಎಂದು ಪಕ್ಷದ ನಾಯಕ ಮುಖ್ತಾರ್ ಅಬ್ಬಾಸ್ ನಕ್ವಿ ಹೇಳಿದ್ದಾರೆ.

ಆದರೆ ಕುಶ್ವಾ ಅವರಿಗೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದಿರಲು ನಿರ್ಧರಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಳಂಕಿತ ಕುಶ್ವಾ ಅವರನ್ನು ಬರಮಾಡಿಕೊಂಡ ಬಿಜೆಪಿ ನಿಲುವನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸಿದೆ. ಇದರಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡುವ ಬಿಜೆಪಿ ಬದ್ಧತೆಯ ಸಾಚಾತನ ಬಯಲಾಗಿದೆ ಎಂದು ವ್ಯಂಗ್ಯವಾಡಿದೆ.

ಒಂದೆಡೆ ಎಲ್.ಕೆ ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ನಡೆಸುತ್ತಾರೆ, ಅವರ ಪಕ್ಷದ ಪ್ರಮುಖರು ಲೋಕಪಾಲ ಮಸೂದೆಗೆ ಸಂಬಂಧಿಸಿದಂತೆ ರಾಷ್ಟ್ರಪತಿಯನ್ನು ಭೇಟಿ ಮಾಡುತ್ತಾರೆ. ಇನ್ನೊಂದೆಡೆ ಬಿಜೆಪಿಯು ಕುಶ್ವಾ ಅಂತಹವರಿಗೆ ಸದಸ್ಯತ್ವ ನೀಡುತ್ತದೆ ಎಂದು ಜರಿದಿದ್ದಾರೆ.

ಮತ ಗಳಿಕೆಗಾಗಿ ಬಿಜೆಪಿ ಯಾರನ್ನು ಬೇಕಾದರೂ ಪುಷ್ಪಗುಚ್ಛ ನೀಡಿ ಆಹ್ವಾನಿಸಲು ಸಿದ್ಧವಿದೆ ಎಂದು ಹೆದ್ದಾರಿ ರಾಜ್ಯ ಸಚಿವ ಜಿತಿನ್ ಪ್ರಸಾದ್ ಅವರು ಟೀಕಿಸಿದ್ದಾರೆ. ಕುಶ್ವಾ ಅವರನ್ನು ಬಿಜೆಪಿಗೆ ಸೇರಿಸಿಕೊಂಡಿರುವುದನ್ನು ಎನ್‌ಡಿಎ ಮಿತ್ರ ಪಕ್ಷವಾದ ಜೆಡಿಯು ಸಹ ಖಂಡಿಸಿದೆ.

ಸಿಬಿಐ ಪ್ರಕರಣ ಕುರಿತಂತೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್)  ದಾಖಲಿಸಿದೆ. ಉತ್ತರ ಪ್ರದೇಶದಲ್ಲಿ ಎನ್‌ಆರ್‌ಎಚ್‌ಎಂ ಅಧಿಕಾರಿಗಳು ಹಾಗೂ ಖಾಸಗಿ ಕಂಪೆನಿಗಳ ವಿರುದ್ಧ ದಾಖಲಿಸಲಾದ ಐದು ಎಫ್‌ಐಆರ್‌ಗಳ ಪೈಕಿ ಒಂದರಲ್ಲಿ ಕುಶ್ವಾ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ.

2009-2011ರ ಅವಧಿಯಲ್ಲಿ ಕುಶ್ವಾ ಅವರು ಕುಟುಂಬ ಕಲ್ಯಾಣ ಸಚಿವರಾಗಿದ್ದಾಗ ಈ ಹಗರಣ ನಡೆದಿತ್ತು. ಆಗ ಯೋಜನೆ ಜಾರಿಯಲ್ಲಿ ಭಾಗಿಯಾಗಿದ್ದ ಇಬ್ಬರು ಮುಖ್ಯ ವೈದ್ಯಾಧಿಕಾರಿಗಳ ಕೊಲೆ ನಡೆದಿತ್ತು.

ಉಪ ಮುಖ್ಯ ವೈದ್ಯಾಧಿಕಾರಿ ಜೈಲಿನಲ್ಲಿ ನಿಗೂಢ ರೀತಿಯಲ್ಲಿ ಸಾವಿಗೀಡಾಗಿದ್ದರು. ಕೋಟ್ಯಂತರ ರೂಪಾಯಿ ವಂಚನೆ ಆಗಿರುವುದು ಬೆಳಕಿಗೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.