ADVERTISEMENT

ಕೋವಿಡ್: ದೇಶದಾದ್ಯಂತ ಕಳೆದ ಎರಡು ದಿನಗಳಲ್ಲಿ ಪತ್ತೆಯಾಗಿದ್ದು 647 ಪ್ರಕರಣಗಳು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2020, 15:19 IST
Last Updated 3 ಏಪ್ರಿಲ್ 2020, 15:19 IST
ಲವ್ ಅಗರವಾಲ್
ಲವ್ ಅಗರವಾಲ್   

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಕೋವಿಡ್ ರೋಗ ಬಾಧಿತ 12 ಮಂದಿ ಸಾವಿಗೀಡಾಗಿದ್ದು, ಈ ಪೈಕಿ ಕೆಲವರು ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹೇಳಿದ್ದಾರೆ.

ದೇಶದಲ್ಲಿ ಕೋವಿಡ್ 19 ರೋಗ ಸ್ಥಿತಿಗತಿ ಬಗ್ಗೆ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಲವ್ ಅಗರವಾಲ್, ಇಲ್ಲಿಯವರೆಗೆ ಭಾರತದಲ್ಲಿ 2,301 ಪ್ರಕರಣಗಳು ದಾಖಲಾಗಿವೆ. 56 ಮಂದಿ ಸಾವಿಗೀಡಾಗಿದ್ದು ಇದರಲ್ಲಿ 12 ಮಂದಿ ಗುರುವಾರ ಪ್ರಾಣಕಳೆದುಕೊಂಡವರಾಗಿದ್ದಾರೆ. 336 ಸೋಂಕು ಪ್ರಕರಣಗಳು ಗುರುವಾರ ದಾಖಲಾಗಿದೆ. ಇಲ್ಲಿಯವರೆಗೆ 157 ಮಂದಿ ಗುಣಮುಖರಾಗಿದ್ದಾರೆ.

ಕಳೆದ ಎರಡು ದಿನಗಳಲ್ಲಿ 647 ಮಂದಿಗೆ ಕೋವಿಡ್ ರೋಗ ಇರುವುದಾಗಿ ದೃಢಪಟ್ಟಿದೆ. ಅಂಡಮಾನ್ ಮತ್ತು ನಿಕೋಬಾರ್, ದೆಹಲಿ, ಅಸ್ಸಾಂ, ಹಿಮಾಚಲ ಪ್ರದೇಶ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕರ್ನಾಟಕ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ತೆಲಂಗಾಣ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿ ಸಾವು ಪ್ರಕರಣ ವರದಿಯಾಗಿದ್ದು, ಹೀಗೆ ಸಾವಿಗೀಡಾದವರು ತಬ್ಲಿಗಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾದವರಾಗಿದ್ದಾರೆ.

ADVERTISEMENT

ಕಳೆದ ಕೆಲವು ದಿನಗಳಿಂದೀಚೆಗೆ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದನ್ನು ನೋಡಿದರೆ ಯಾವ ರೀತಿ ಸೋಂಕು ಹರಡಿದೆ ಎಂಬುದು ಗೊತ್ತಾಗುತ್ತದೆ ಎಂದು ಲವ್ ಹೇಳಿದ್ದಾರೆ.

ಲಾಕ್‌ಡೌನ್, ಸಾಮಾಜಿಕ ಅಂತರ, ಕಾಳಜಿ ಬಗ್ಗೆ ನಾವು ಸತತ ಶ್ರಮವಹಿಸಿದರೂ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ. ಆದರೆ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರಗತಿಯ ಏರಿಕೆ ಕಂಡು ಬಂದಿಲ್ಲ ಎಂದು ಹೇಳಿದ್ದಾರೆ.

ಕೋವಿಡ್ ರೋಗ ಪತ್ತೆಗಾಗಿ 182 ಲ್ಯಾಬ್‌ಗಳಿವೆ. ಇವುಗಳ ಪೈಕಿ 130 ಸರ್ಕಾರಿ ಲ್ಯಾಬ್‌ಗಳಾಗಿವೆ ಎಂದು ಐಸಿಎಂಆರ್ ಆಧಿಕಾರಿಗಳು ಹೇಳಿದ್ದಾರೆ. ಗುರುವಾರದವರೆಗೆ 8,000 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಕೋವಿಡ್-19 ಬಗ್ಗೆ ಮಾಹಿತಿ ನೀಡುವ ಆರೋಗ್ಯ ಸೇತು ಮೊಬೈಲ್ ಆ್ಯಪ್‌ನ್ನು 30 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಡೌನ್‌ಲೋಡ್ ಮಾಡಿದ್ದಾರೆ ಎಂದು ಲವ್ ಅಗರವಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.