ADVERTISEMENT

ಕೋವಿಡ್: ಕೊಳೆಗೇರಿಯ ಶೇ 67 ಯುವತಿಯರು ಮಾತ್ರ ಆನ್ ಲೈನ್ ತರಗತಿಯಲ್ಲಿ ಭಾಗಿ!

ಹೆಣ್ಣು ಮಕ್ಕಳ ಮನೋರಂಜನೆ ಚಟುವಟಿಕೆಯನ್ನು ಕಸಿದುಕೊಂಡ ಕೋವಿಡ್ ಲಾಕ್ ಡೌನ್

ಪಿಟಿಐ
Published 3 ಮಾರ್ಚ್ 2022, 15:35 IST
Last Updated 3 ಮಾರ್ಚ್ 2022, 15:35 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 2020ರಲ್ಲಿ ದೇಶದಲ್ಲಿ ಆವರಿಸಿದ ಕೊರೊನಾ ವೈರಸ್ಸಿನ ಮೊದಲ ಅಲೆಯಿಂದಾಗಿ ದೆಹಲಿ, ಮಹಾರಾಷ್ಟ್ರ, ಬಿಹಾರ ಮತ್ತು ತೆಲಂಗಾಣದ ಕೊಳೆಗೇರಿ ಪ್ರದೇಶದ ಶೇ 67ರಷ್ಟು ಯುವತಿಯರು ಮಾತ್ರವೇ ಆನ್ ಲೈನ್ ತರಗತಿಗಳಲ್ಲಿ ಭಾಗಿಯಾಗಿದ್ದಾರೆ. ಅಲ್ಲದೆ ಕೋವಿಡ್ ಪರಿಣಾಮ ಶೇ 56ರಷ್ಟು ಯುವತಿಯರು ತಮ್ಮ ಮನೋರಂಜನೆ ಚಟುವಟಿಕೆಗಳಿಂದ ವಂಚಿತರಾಗಿದ್ದಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದೆ.

"ಸೇವ್ ದಿ ಚಿಲ್ಡ್ರನ್' ಎಂಬ ಎನ್ ಜಿಒ ನಡೆಸಿದ ಈ ಅಧ್ಯಯನದಲ್ಲಿ ಕಳೆದ ವರ್ಷದ ಫೆಬ್ರವರಿಯಲ್ಲಿ ಈ ನಾಲ್ಕು ರಾಜ್ಯಗಳ 10 ವರ್ಷದಿಂದ 18 ವಯೋಮಾನದ ಶೇ 68 ಯುವತಿಯರು ವೈದ್ಯಕೀಯ ಚಿಕಿತ್ಸೆ ಮತ್ತು ಪೌಷ್ಟಿಕ ಸೇವೆಗಳಿಂದ ವಂಚಿತರಾಗಿದ್ದರು ಎಂದು ಹೇಳಿದೆ. ದೆಹಲಿ, ಮಹಾರಾಷ್ಟ್ರ, ಬಿಹಾರ ಮತ್ತು ತೆಲಂಗಾಣ ರಾಜ್ಯಗಳು ದೇಶದ ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ವಲಯಗಳಾದ ಹಿನ್ನೆಲೆಯಲ್ಲಿ ಈ ರಾಜ್ಯಗಳಲ್ಲಿ ಈ ಅಧ್ಯಯನ ನಡೆಸಲಾಗಿದೆ ಎನ್ನಲಾಗಿದೆ.

ಕೋವಿಡ್ ವ್ಯಾಪಕವಾಗಿ ಹರಡುವ ಭೀತಿಯಿಂದ 2020ರಲ್ಲಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಯಿತು. ಈ ವೇಳೆ ಶಾಲೆಗಳು ಮತ್ತು ಆರೋಗ್ಯ ಕೇಂದ್ರಗಳನ್ನು ಮುಚ್ಚಲಾಯಿತು. ಇದರಿಂದಾಗಿ ವೈದ್ಯ ಸಿಬ್ಬಂದಿಯ ಕೊರತೆ ಉಂಟಾಗಿ, ಆರೋಗ್ಯ ಕೇಂದ್ರದ ಬಳಿ ವೈದ್ಯ ತಪಾಸಣೆಗಾಗಿ ಉದ್ದದ ಸಾಲುಗಳು ಏರ್ಪಟ್ಟವು. ಇದರ ಪರಿಣಾಮ ಹದಿಹರೆಯದ ಯುವತಿಯರು ವೈದ್ಯಕೀಯ ಚಿಕಿತ್ಸೆ ಮತ್ತು ಪೌಷ್ಟಿಕ ಸೇವೆಗಳಿಂದ ವಂಚಿತರಾಗಿದ್ದರು. ಲಾಕ್ ಡೌನ್ ತೆರವು ಬಳಿಕ ಶೇ 51ರಷ್ಟು ಯುವತಿಯರು ಆರೋಗ್ಯ ಸೇವೆ ಪಡೆಯಲು ಹರಸಾಹಸಪಟ್ಟಿದ್ದಾರೆ ಎಂದು "ವಿಂಗ್ಸ್ 2022: ವರ್ಲ್ಡ್ ಆಫ್ ಇಂಡಿಯಾ ಗರ್ಲ್ಸ್: ಸ್ಪಾಟ್ ಲೈಟ್ ಆನ್ ಅಡೋಲೆಸ್ಸೆಂಟ್ ಗರ್ಲ್ಸ್ ಆ್ಯಮಿಡ್ ಕೋವಿಡ್-19' ಎಂಬ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಈ ನಾಲ್ಕು ರಾಜ್ಯಗಳ ಪ್ರತಿ ಮೂರು ಯುವತಿಯರ ಪೈಕಿ ಒಬ್ಬ ಯುವತಿ ಮಾತ್ರ ಆನ್ ಲೈನ್ ತರಗತಿಯಲ್ಲಿ ಪಾಲ್ಗೊಂಡಿದ್ದಾರೆ. ಅಲ್ಲದೆ ನಾಲ್ವರು ತಾಯಂದಿರ ಪೈಕಿ ಮೂವರು ತಾಯಂದಿರು, ಕೊರೋನಾ ವೈರಸ್ ತಮ್ಮ ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿ ಐವರು ವಿದ್ಯಾರ್ಥಿಗಳ ಪೈಕಿ ಇಬ್ಬರು ವಿದ್ಯಾರ್ಥಿ(ಶೇ.42)ಗಳನ್ನು ಅವರು ಓದುತ್ತಿದ್ದ ಶಾಲೆಗಳಿಂದ ಮತ್ತೆ ಸಂಪರ್ಕಿಸಲು ಯತ್ನಿಸಿಲ್ಲ ಎಂದು ವರದಿ ತಿಳಿಸಿದೆ.

ಕೊರೊನಾದಿಂದ ಉದ್ಯೋಗ ನಷ್ಟ ಮತ್ತು ಕುಟುಂಬದ ಆದಾಯ ಕುಸಿತವೂ ಆಗಿದೆ. ಜತೆಗೆ ಮಕ್ಕಳ ಮದುವೆ ಪ್ರಕರಣಗಳು ಹೆಚ್ಚಾಗಿವೆ ಎಂದು ಈ ವರದಿಯಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.