ಜಮ್ಮು: ಭಾರಿ ಮಳೆಯ ನಡುವೆಯೂ 6,900 ಯಾತ್ರಾರ್ಥಿಗಳ ತಂಡವು ಶನಿವಾರ ಅಮರನಾಥ ಯಾತ್ರೆಯನ್ನು ಪ್ರಾರಂಭಿಸಿತು.
ಇದು ಈ ವರ್ಷ ಯಾತ್ರೆ ಕೈಗೊಂಡ ನಾಲ್ಕನೇ ತಂಡವಾಗಿದ್ದು, ಒಟ್ಟು 6,979 ಯಾತ್ರಾರ್ಥಿಗಳು ಬೆಳಗಿನ ಜಾವ 3.30ರಿಂದ 4 ಗಂಟೆಗೆ ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ವಾಹನಗಳಲ್ಲಿ ಹೊರಟರು. ಯಾತ್ರಾರ್ಥಿಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5,196 ಪುರುಷರು, 1,427 ಮಹಿಳೆಯರು, 24 ಮಕ್ಕಳು, 331 ಸಾಧು ಹಾಗೂ ಸಾಧ್ವಿಗಳು ಮತ್ತು ಒಬ್ಬರು ಲಿಂಗತ್ವ ಅಲ್ಪಸಂಖ್ಯಾತರು ಈ ತಂಡದಲ್ಲಿದ್ದಾರೆ.
ಈ ತಂಡದ 4,226 ಯಾತ್ರಾರ್ಥಿಗಳು 48 ಕಿ.ಮೀ ಉದ್ದದ ಪಹಲ್ಗಾಮ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರೆ, 2,753 ಯಾತ್ರಾರ್ಥಿಗಳು 14 ಕಿ.ಮೀ ಉದ್ದದ ಕಡಿದಾದ ಬಾಲ್ತಾಲ್ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಎರಡೂ ತಂಡಗಳು ಕ್ರಮವಾಗಿ 161 ಹಾಗೂ 151 ವಾಹನಗಳಲ್ಲಿ ಹೊರಟರು ಎಂದು ಅವರು ತಿಳಿಸಿದರು.
ಜುಲೈ 3ರಂದು ಪ್ರಾರಂಭವಾಗಿರುವ 38 ದಿನಗಳ ಯಾತ್ರೆಯು ಆಗಸ್ಟ್ 9ಕ್ಕೆ ಮುಕ್ತಾಯಗೊಳ್ಳಲಿದೆ. ಈವರೆಗೆ 30 ಸಾವಿರ ಭಕ್ತರು ಯಾತ್ರೆ ಕೈಗೊಂಡಿದ್ದಾರೆ. ಈವರೆಗೆ 3.5 ಲಕ್ಷ ಯಾತ್ರಾರ್ಥಿಗಳು ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಂಡಿದ್ದಾರೆ.
ಏ.22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವಿಗೀಡಾದ ಘಟನೆಯು ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ಯಾತ್ರೆಯು ಸುಗಮವಾಗಿ ಸಾಗುತ್ತಿದೆ. ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಐದು ಬಸ್ ಸರಣಿ ಅಪಘಾತ: 36 ಯಾತ್ರಾರ್ಥಿಗಳಿಗೆ ಗಾಯ
ಜಮ್ಮು ಮತ್ತು ಕಾಶ್ಮೀರದ ರಾಂಬನ್ ಜಿಲ್ಲೆಯಲ್ಲಿ ಐದು ಬಸ್‌ಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ 36 ಮಂದಿ ಅಮರನಾಥ ಯಾತ್ರಾರ್ಥಿಗಳು ಶನಿವಾರ ಗಾಯಗೊಂಡಿದ್ದಾರೆ.
ಎಲ್ಲ ಬಸ್‌ಗಳು ಜಮ್ಮುವಿನ ಭಗವತಿ ನಗರದ ಬೇಸ್ ಕ್ಯಾಂಪ್‌ನಿಂದ ಪಹಲ್ಗಾಮ್ ಬೇಸ್ ಕ್ಯಾಂಪ್‌ಗೆ ತೆರಳುತ್ತಿದ್ದವು. ಜಮ್ಮು– ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮುಂಜಾನೆ 8 ಗಂಟೆಗೆ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕೊನೆಯಲ್ಲಿದ್ದ ಬಸ್‌ನ ಬ್ರೇಕ್ ವಿಫಲವಾಗಿತ್ತು. ನಿಯಂತ್ರಣ ತಪ್ಪಿ ಅದು ಮುಂದಿನ ಬಸ್‌ಗೆ ಡಿಕ್ಕಿಯಾದ ಕಾರಣ ಅಪಘಾತ ಸಂಭವಿಸಿದ್ದು ಬಸ್‌ಗಳಿಗೂ ಹಾನಿಯಾಗಿದೆ. ಕೂಡಲೇ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು. ನಂತರ ಯಾತ್ರಾರ್ಥಿಗಳನ್ನು ಬೇರೆ ವಾಹನಗಳಲ್ಲಿ ನಿಗದಿತ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.