ADVERTISEMENT

ಯುಪಿ: ₹10 ಲಕ್ಷ ಪಡೆದು ಪ್ರಶ್ನೆಪತ್ರಿಕೆ ಸೋರಿಕೆ; 7 ಮಂದಿ ಬಂಧನ

ಪಿಟಿಐ
Published 6 ಮಾರ್ಚ್ 2024, 12:58 IST
Last Updated 6 ಮಾರ್ಚ್ 2024, 12:58 IST
   

ಮೀರತ್: ಉತ್ತರ ಪ್ರದೇಶದ ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಿಶೇಷ ಕಾರ್ಯಪಡೆಯು(ಎಸ್‌ಟಿಎಫ್‌) ಮೀರತ್ ಮತ್ತು ದೆಹಲಿಯಲ್ಲಿ 7 ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರು ಪೊಲೀಸ್ ನೇಮಕಾತಿ ಮತ್ತು ಬಡ್ತಿ ಮಂಡಳಿ ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾಗಿರುವ ಗ್ಯಾಂಗ್‌ನ ಸದಸ್ಯರಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆಯ ಭಾರಿ ಅಕ್ರಮದ ಹಿನ್ನೆಲೆಯಲ್ಲಿ ಸರ್ಕಾರ ಪರೀಕ್ಷೆಯನ್ನು ರದ್ದು ಮಾಡಿತ್ತು. ಪ್ರಕರಣ ಸಂಬಂಧ ಈ ತಿಂಗಳ ಆರಂಭದಲ್ಲಿ ಕೆಲವರನ್ನು ಬಂಧಿಸಲಾಗಿತ್ತು.

ADVERTISEMENT

ಮೀರತ್‌ ಜಿಲ್ಲೆಯ ನಿವಾಸಿಗಳಾದ ದೀಪಕ್, ಬಿಟ್ಟು, ಪ್ರವೀಣ್, ರೋಹಿತ್, ನವೀನ್, ಸಾಹಿಲ್ ಅವರನ್ನು ಮಂಗಳವಾರ ರಾತ್ರಿ ಕಂಕೇರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ಗೌತಮ ಬುದ್ಧ ನಗರದ ಪ್ರಮೋದ್ ಪಾಠಕ್ ಎಂಬ ಮತ್ತೊಬ್ಬ ಆರೋಪಿಯನ್ನು ದೆಹಲಿಯ ಮುಖರ್ಜಿ ನಗರದಲ್ಲಿ ಬಂಧಿಸಲಾಗಿದೆ.

ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ಕೊಡುವುದು ಮತ್ತು ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಡುವ ನುರಿತರನ್ನು ವ್ಯವಸ್ಥೆ ಮಾಡುವ ಕೆಲಸವನ್ನು ಈ ಗ್ಯಾಂಗ್ ಮಾಡುತ್ತಿತ್ತು ಎಂದು ಪ್ರಕಟಣೆ ತಿಳಿಸಿದೆ.

2024ರ ಕಾನ್‌ಸ್ಟೆಬಲ್ ನೇಮಕಾತಿ ಪರೀಕ್ಷೆ, ಉತ್ತರ ಸಿದ್ಧಪಡಿಸಲಾಗಿರುವ ಪ್ರಶ್ನೆಪತ್ರಿಕೆ, ಹಲವು ಮೊಬೈಲ್ ಪೋನ್ ಮತ್ತು ನಗದನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದೂ ಅದು ತಿಳಿಸಿದೆ.

ಆರೋಪಿಗಳು ಅಭ್ಯರ್ಥಿಗಳಿಂದ ಪ್ರಶ್ನೆಪತ್ರಿಕೆಗೆ ಸುಮಾರು ₹8 ಲಕ್ಷದಿಂದ ₹10 ಲಕ್ಷ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.