ADVERTISEMENT

ನಾಗಾಲ್ಯಾಂಡ್‌ನಲ್ಲಿ ಮೇ 14 ರಿಂದ 7 ದಿನ ಸಂಪೂರ್ಣ ಲಾಕ್‌ಡೌನ್

ಪಿಟಿಐ
Published 11 ಮೇ 2021, 9:24 IST
Last Updated 11 ಮೇ 2021, 9:24 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಹಿಮಾ: ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ ಮೇ 14 ರಿಂದ ಏಳು ದಿನಗಳವರೆಗೆ ನಾಗಲ್ಯಾಂಡ್‌ನಲ್ಲಿ ಸಂಪೂರ್ಣ ಲಾಕ್‌ಡೌನ್ ವಿಧಿಸಲು ಅಲ್ಲಿನ ಸರ್ಕಾರ ನಿರ್ಧರಿಸಿದೆ.

ಕೋವಿಡ್ ನಿರ್ವಹಣೆಯ ರಾಜ್ಯ ಸರ್ಕಾರದ ವಕ್ತಾರ ಮತ್ತು ಸಚಿವ ನೀಬಾ ಕ್ರೊನು ಮಾತನಾಡಿ, ಮೇ 14 ರಂದು ಸಂಜೆ 6 ರಿಂದ ಮೇ 21 ರವರೆಗೆ ಒಂದು ವಾರ ರಾಜ್ಯವ್ಯಾಪಿ ಸಂ‍ಪೂರ್ಣ ಲಾಕ್‌ಡೌನ್ ಜಾರಿ ಮಾಡಲು ಕೋವಿಡ್ -19 ಕುರಿತ ಉನ್ನತಾಧಿಕಾರ ಸಮಿತಿ (ಎಚ್‌ಪಿಸಿ) ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಮಂಗಳವಾರ ಮುಖ್ಯಮಂತ್ರಿ ನೀಫಿಯು ರಿಯೊ ಅವರ ಅಧ್ಯಕ್ಷತೆಯಲ್ಲಿ ನಡೆದ ಎಚ್‌ಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು.

ADVERTISEMENT

ಕೋವಿಡ್-19 ಪ್ರಸರಣದ ಸರಪಳಿಯನ್ನು ಮುರಿಯುವ ಉದ್ದೇಶದಿಂದ ವಾರ ಪೂರ್ತಿ ಸಂಪೂರ್ಣ ಲಾಕ್‌ಡೌನ್ ವಿಧಿಸಲು ಎಚ್‌ಪಿಸಿ ನಿರ್ಧರಿಸಿದೆ ಎಂದು ಕ್ರೊನು ಹೇಳಿದರು.

ಸಂಪೂರ್ಣ ಲಾಕ್‌ಡೌನ್ ಜಾರಿಗೆ ಬರುವವರೆಗೂ ಅಸ್ತಿತ್ವದಲ್ಲಿರುವ ನಿರ್ಬಂಧಗಳು ಮುಂದುವರಿಯಲಿವೆ ಮತ್ತು ಹೊಸ ಎಸ್‌ಒಪಿಗಳನ್ನು ಸಹ ನೀಡಲಾಗುವುದು ಎಂದು ಅವರು ಹೇಳಿದರು.

ಆದರೆ, ಕೃಷಿ ಚಟುವಟಿಕೆಗಳು ಸೇರಿದಂತೆ ಅಗತ್ಯ ಸೇವೆಗಳನ್ನು ಲಾಕ್‌ಡೌನ್ ವ್ಯಾಪ್ತಿಯಿಂದ ಮುಕ್ತಗೊಳಿಸಲಾಗುವುದು ಎಂದು ಕ್ರೋನು ಹೇಳಿದ್ದಾರೆ.

ಐದು ದಿನಗಳಲ್ಲಿ 1,279 ಹೊಸ ಪ್ರಕರಣಗಳು ಕಂಡುಬಂದಿರುವುದರಿಂದ ಈ ನಿರ್ಧಾರ ಪ್ರಕಟಿಸಿದೆ. ಮೇ 5 ರ ಹೊತ್ತಿಗೆ, ರಾಜ್ಯವು ಒಟ್ಟು 15,004 ಕೋವಿಡ್ ಪ್ರಕರಣಗಳನ್ನು ಹೊಂದಿತ್ತು. ಇದರಲ್ಲಿ 2,038 ಸಕ್ರಿಯ ಪ್ರಕರಣಗಳಿದ್ದವು. ಆದರೆ, ಮೇ 10ರ ಹೊತ್ತಿಗೆ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 16,283ಕ್ಕೆ ಏರಿದ್ದು, ಸಕ್ರಿಯ ಪ್ರಕರಣಗಳು 2,884ಕ್ಕೆ ತಲುಪಿವೆ.

ಇದನ್ನೂ ಓದಿ.. ಜನರ ದಾರಿ ತಪ್ಪಿಸುವುದನ್ನು ನಿಲ್ಲಿಸಿ: ಸೋನಿಯಾ ಗಾಂಧಿಗೆ ನಡ್ಡಾ ಪತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.