ADVERTISEMENT

ಬಿಹಾರ: ಹಳಿ ತಪ್ಪಿದ ಸೀಮಾಂಚಲ ಎಕ್ಸ್‌ಪ್ರೆಸ್, 7 ಜನ ಸಾವು, 24 ಮಂದಿಗೆ ಗಂಭೀರ ಗಾಯ

ಪಿಟಿಐ
Published 3 ಫೆಬ್ರುವರಿ 2019, 19:05 IST
Last Updated 3 ಫೆಬ್ರುವರಿ 2019, 19:05 IST
   

ಪಟ್ನಾ(ಬಿಹಾರ): ವೈಶಾಲಿ ಜಿಲ್ಲೆಯ ಸಹದೇಯಿ ಬುಜುರ್ಗ್‌ ಎಂಬಲ್ಲಿ ಸೀಮಾಂಚಲ ಎಕ್ಸ್‌ಪ್ರೆಸ್‌ ರೈಲು ಹಳಿತಪ್ಪಿದ ಪರಿಣಾಮ ಏಳು ಪ್ರಯಾಣಿಕರು ಮೃತಪಟ್ಟಿದ್ದಾರೆ.

ಬಿಹಾರದ ಜೋಗ್ಬನಿಯಿಂದ ದೆಹಲಿಯ ಆನಂದ್‌ ವಿಹಾರ ಟರ್ಮಿನಲ್‌ಗೆ ಹೊರಟಿದ್ದ ರೈಲು 340 ಕಿ.ಮೀ. ಕ್ರಮಿಸಿದ್ದಾಗ, ಪೂರ್ವ ಕೇಂದ್ರ ರೈಲ್ವೆಯ ಸೋನೆಪುರ ವಿಭಾಗೀಯ ವ್ಯಾಪ್ತಿಯಲ್ಲಿ ಭಾನುವಾರ ಬೆಳಗಿನ ಜಾವ 4 ಗಂಟೆಗೆ ಅಪಘಾತ ಸಂಭವಿಸಿದೆ. 40 ಮಂದಿ ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ.

ಹಳಿ ತುಂಡಾಗಿರುವುದು ಅಪಘಾತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಒಂದು ಎ.ಸಿ., ಮೂರು ಸ್ಲೀಪರ್ ಬೋಗಿಗಳು ಸೇರಿದಂತೆ 11 ಬೋಗಿಗಳು ಹಳಿ ತಪ್ಪಿವೆ ಎಂದು ಪೂರ್ವ ಕೇಂದ್ರ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಜೀವ್‌ ಕುಮಾರ್‌ ತಿಳಿಸಿದ್ದಾರೆ.

ADVERTISEMENT

ದುರಂತ ಸ್ಥಳದಲ್ಲಿ ಪ್ರಯಾಣಿಕರಿಗೆ ಕುಡಿಯುವ ನೀರು ಮತ್ತು ಆಹಾರದ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಕಲ್ಪಿಸಿತ್ತು. ರಕ್ಷಣಾ ಕಾರ್ಯಕ್ಕೆ ಸ್ಥಳೀಯರು ನೆರವು ನೀಡಿದರು.

ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ, ಗಂಭೀರವಾಗಿ ಗಾಯಗೊಂಡವರಿಗೆ ₹1ಲಕ್ಷ, ಸಣ್ಣಪುಟ್ಟ ಗಾಯಗೊಂಡವರಿಗೆ ₹50 ಸಾವಿರ ಪರಿಹಾರವನ್ನು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಘೋಷಿಸಿದ್ದಾರೆ.

ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮೃತರ ಕುಟುಂಬಕ್ಕೆ ₹ 4 ಲಕ್ಷ ಘೋಷಿಸಿದ್ದಾರೆ.

ರಕ್ಷಣ ಕಾರ್ಯಾಚರಣೆಯಲ್ಲಿ ಸ್ಥಳೀಯರು ಸಹಕಾರ ನೀಡುತ್ತಿದ್ದು, ವಿಪತ್ತು ನಿರ್ವಹಣಾ ತಂಡ, ವೈದ್ಯರು ಹಾಗೂ ಪೊಲೀಸರು ಸ್ಥಳದಲ್ಲಿದ್ದಾರೆ.

ದುರಂತದ ಮೃತಪಟ್ಟವರ ಬಗ್ಗೆಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಶೋಕ ವ್ಯಕ್ತಪಡಿಸಿದ್ದಾರೆ. ’ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ರೈಲ್ವೆ ಅಧಿಕಾರಿಗಳಿಗೆ ಸಹಕರಿಸುತ್ತಿದ್ದಾರೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಬಿಹಾರ ಸರ್ಕಾರದಿಂದ ಮೃತರ ಕುಟುಂಬಕ್ಕೆ ₹4 ಲಕ್ಷ ಹಾಗೂ ಗಾಯಗೊಂಡಿರುವವರಿಗೆ ₹50 ಸಾವಿರ ಪರಿಹಾರ ಘೋಷಿಸಲಾಗಿದೆ.

ಸೀಮಾಂಚಲ್‌ ಎಕ್ಸ್‌ಪ್ರೆಸ್‌ನ ಉಳಿದ 12 ಬೋಗಿಗಳು ಹಜೀಪುರ್‌ ಕಡೆಗೆ ಸಂಚರಿಸಿದ್ದು, ಅಲ್ಲಿ ಮತ್ತಷ್ಟು ಬೋಗಿಗಳನ್ನು ಸೇರಿಸಿ ರೈಲು ಪ್ರಯಾಣ ಮುಂದುವರಿಸಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಒಂದು ಸಾಮಾನ್ಯ ಬೋಗಿ, ಎಸಿ ಬೋಗಿ ಬಿ3, ಸ್ಲೀಪರ್‌ ಕೋಚ್‌ಗಳಾದ ಎಸ್‌ 8, ಎಸ್‌ 9, ಎಸ್‌ 10 ಹಾಗೂ ಇತರೆ ಆರು ಬೋಗಿಗಳು ಹಳಿ ತಪ್ಪಿರುವುದಾಗಿ ಪೂರ್ವ ಮಧ್ಯ ರೈಲ್ವೆ ವಕ್ತಾರ ರಾಜೇಶ್‌ ಕುಮಾರ್‌ ತಿಳಿಸಿದ್ದಾರೆ.

ರೈಲ್ವೆ ಸಹಾಯವಾಣಿ ಸಂಖ್ಯೆ: ಸೋನ್‌ಪುರ್‌– 06158221645, ಹಾಜಿಪುರ್‌– 06224272230 ಹಾಗೂ ಬರೌನಿ– 06279232222

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.