ADVERTISEMENT

ತಿರುಪತಿ ಬಳಿ ಕಂದಕಕ್ಕೆ ಉರುಳಿದ ಬಸ್: 7 ಮಂದಿ ಸಾವು, 45 ಜನರಿಗೆ ಗಾಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಮಾರ್ಚ್ 2022, 11:00 IST
Last Updated 27 ಮಾರ್ಚ್ 2022, 11:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಿತ್ತೂರು: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಭಾಕರಾಪೇಟ ಗುಡ್ಡಗಾಡು ಪ್ರದೇಶದಲ್ಲಿ ಖಾಸಗಿ ಬಸ್‌ವೊಂದು ಆಳವಾದ ಕಂದಕಕ್ಕೆ ಉರುಳಿದ್ದು, ಪರಿಣಾಮ ಎಂಟು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಅವಘಡ ಶನಿವಾರ ರಾತ್ರಿ ಸಂಭವಿಸಿದೆ. ಬಸ್‌ನಲ್ಲಿ ಸುಮಾರು 60 ಜನರಿದ್ದರು. ಅನಂತಪುರಂನ ಧರ್ಮಾವರಂನಿಂದ ತಿರುಪತಿಯ ತಿರುಚನೂರ್‌ಗೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದರು.ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದೆ.

ಕಠಿಣ ತಿರುವುಗಳಿದ್ದ ರಸ್ತೆಯಲ್ಲಿ ಬಸ್ ಸಾಗುತ್ತಿತ್ತು. ಚಾಲಕನಿಗೆ ರಸ್ತೆಯ ಪರಿಚಯ ಅಷ್ಟಾಗಿ ಇರಲಿಲ್ಲ. ಆದರೂ ಚಾಲಕಅತಿವೇಗವಾಗಿ ಬಸ್ ಚಲಾಯಿಸಿದ್ದೇ ಅವಘಡಕ್ಕೆ ಕಾರಣ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಸಾರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ADVERTISEMENT

ಚಾಲಕ ಮೊಹಮ್ಮದ್‌ ರಸೂಲ್‌ ಹಾಗೂ ಮಾಲಿಶೆಟ್ಟಿ ಮುರಳಿ, ವೆಂಗಪ್ಪ ಸೇರಿದಂತೆ ಏಳು ಪ್ರಯಾಣಿಕರು ಮೃತಪಟ್ಟಿದ್ದಾರೆ. ಅವಘಡಕ್ಕೆ ಸ್ವಲ್ಪ ಹೊತ್ತು ಮೊದಲಷ್ಟೇ ಪ್ರಯಾಣಿಕರು ನಿಧಾನವಾಗಿ ಬಸ್‌ ಚಲಿಸುವಂತೆ ಚಾಲಕನಿಗೆ ತಿಳಿಸಿದ್ದರು ಎಂದು ತಿಳಿಸಿದ್ದಾರೆ.

ಅಗ್ನಿಶಾಮಕ ಸೇವೆ ಸಿಬ್ಬಂದಿಯ ನೆರವಿನಲ್ಲಿ ಪೊಲೀಸರು ರಕ್ಷಣಾ ಕಾರ್ಯ ನಡೆಸಿದರು. ‘ಮೃತರ ಕುಟುಂಬಕ್ಕೆ ತಲಾ ₹ 2 ಲಕ್ಷ, ಗಾಯಾಳುಗಳಿಗೆ ತಲಾ ₹ 50 ಸಾವಿರ ಪರಿಹಾರವನ್ನು ಮುಖ್ಯಮಂತ್ರಿ ಘೋಷಿಸಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.