ADVERTISEMENT

ಲಡಾಖ್ ಘರ್ಷಣೆಯಲ್ಲಿ ಗಾಯಗೊಂಡಿದ್ದ 76 ಯೋಧರ ಆರೋಗ್ಯ ಸ್ಥಿತಿ ಸ್ಥಿರ: ಭಾರತೀಯ ಸೇನೆ

ಏಜೆನ್ಸೀಸ್
Published 19 ಜೂನ್ 2020, 2:47 IST
Last Updated 19 ಜೂನ್ 2020, 2:47 IST
ಲೇಹ್‌ನಲ್ಲಿರುವ ಸೇನಾ ಆಸ್ಪತ್ರೆ
ಲೇಹ್‌ನಲ್ಲಿರುವ ಸೇನಾ ಆಸ್ಪತ್ರೆ   

ಲಡಾಖ್: ಕಳೆದ ಸೋಮವಾರ ರಾತ್ರಿ ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದಲ್ಲಿ ಭಾರತದೊಂದಿಗೆ ಚೀನಾ ನಡೆಸಿದ ಹಿಂಸಾತ್ಮಕ ಘರ್ಷಣೆಯಲ್ಲಿ ಭಾರತದ 20 ಯೋಧರು ಮೃತಪಟ್ಟು, 76 ಸೈನಿಕರು ಗಾಯಗೊಂಡಿದ್ದರು. ಆದರೀಗ ಎಲ್ಲರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಗುರುವಾರ ಭಾರತೀಯ ಸೇನಾ ಮೂಲಗಳು ತಿಳಿಸಿವೆ.

ಲಡಾಖ್ ಘರ್ಷಣೆಯಲ್ಲಿ ಗಾಯಗೊಂಡ 76 ಸೈನಿಕರ ಪೈಕಿ ಲೇಹ್‌ನ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 18 ಸೈನಿಕರಲ್ಲಿ ಯಾರೊಬ್ಬರ ಸ್ಥಿತಿಯೂ ಗಂಭೀರವಾಗಿಲ್ಲ ಮತ್ತು ಎಲ್ಲರ ಆರೋಗ್ಯ ಸ್ಥಿರವಾಗಿದೆ. ಇತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ 58 ಸೈನಿಕರು ಒಂದು ವಾರದೊಳಗೆ ಕರ್ತವ್ಯಕ್ಕೆ ಮರಳಬೇಕು ಎಂದು ಭಾರತೀಯ ಸೇನೆ ತಿಳಿಸಿದೆ.

'ಸದ್ಯದ ಪರಿಸ್ಥಿತಿಯಲ್ಲಿ ಯಾರೂಬ್ಬರೂ ಗಂಭೀರವಾಗಿಲ್ಲ, ಎಲ್ಲರ ಆರೋಗ್ಯ ಸ್ಥಿರವಾಗಿದೆ. 18 ಸೈನಿಕರು ಲೇಹ್‌ನ ನಮ್ಮ ಆಸ್ಪತ್ರೆಯಲ್ಲಿದ್ದಾರೆ. ಅವರು ಸುಮಾರು 15 ದಿನಗಳಲ್ಲಿ ಕರ್ತವ್ಯಕ್ಕೆ ಮರಳಲಿದ್ದಾರೆ. 58 ಸೈನಿಕರು ಇತರ ಆಸ್ಪತ್ರೆಗಳಲ್ಲಿದ್ದು, ಸಣ್ಣಪುಟ್ಟ ಗಾಯಗಳಾಗಿವೆ. ಆದ್ದರಿಂದ ಅವರ ಚೇತರಿಕೆಗೆ ಒಂದು ವಾರದ ಕಾಲಾವಧಿ ಬೇಕಾಗಿದೆ. ನಂತರ ಅವರು ಒಂದು ವಾರದೊಳಗೆ ಕರ್ತವ್ಯಕ್ಕೆ ಮರಳಬೇಕು' ಎಂದು ಸೇನೆ ತಿಳಿಸಿದೆ.

ADVERTISEMENT

ಇದೇ ವೇಳೆ ಘರ್ಷಣೆ ನಡೆದ ವೇಳೆ ನಮ್ಮ ಯಾವುದೇ ಸೈನಿಕರು ಕಣ್ಮರೆಯಾಗಿಲ್ಲ ಎಂದು ಭಾರತೀಯ ಸೇನೆ ಸ್ಪಷ್ಟಪಡಿಸಿದೆ.

ಗಾಲ್ವನ್ ಕಣಿವೆಯಲ್ಲಿ ನಡೆದ ಹಿಂಸಾತ್ಮಕ ಮುಖಾಮುಖಿಯಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ ಒಟ್ಟು 20 ಭಾರತೀಯ ಸೇನಾ ಸಿಬ್ಬಂದಿ ಪ್ರಾಣ ಕಳೆದುಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.