ADVERTISEMENT

ಮಹಾರಾಷ್ಟ್ರ | ವಾಮಾಚಾರದ ಶಂಕೆ: 77 ವರ್ಷದ ವೃದ್ಧೆಗೆ ಮೂತ್ರ ಕುಡಿಸಿ, ಹಲ್ಲೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2025, 13:51 IST
Last Updated 18 ಜನವರಿ 2025, 13:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಮರಾವತಿ, ಮಹಾರಾಷ್ಟ್ರ: ವಾಮಾಚಾರ ನಡೆಸುತ್ತಿದ್ದಾರೆ ಎಂಬ ಶಂಕೆಯ ಮೇಲೆ 77 ವರ್ಷದ ವೃದ್ಧೆ ಮೇಲೆ ಹಲ್ಲೆ ನಡೆಸಿ, ನಂತರ ಅವರಿಗೆ ಮೂತ್ರ ಕುಡಿಸಿದ ಪ್ರಕರಣ ಮಹಾರಾಷ್ಟ್ರದ ಅಮರಾವತಿ ಜಿಲ್ಲೆಯಲ್ಲಿ ನಡೆದಿದೆ.

ಸಂತ್ರಸ್ತೆಯು ಚಿಕಲಾದಾರ ತಾಲ್ಲೂಕಿನ ರೆತ್ಯಾಖೇಡಾ ಗ್ರಾಮದ ನಿವಾಸಿ ಎಂದು ಗುರುತಿಸಲಾಗಿದೆ. ಡಿ.30ರಂದೇ ಈ ಘಟನೆ ನಡೆದಿದೆ. ತಿಂಗಳ ಆರಂಭದಲ್ಲಿಯೇ ಪ್ರಕರಣ ದಾಖಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂತ್ರಸ್ತೆಯ ಮಗ ಹಾಗೂ ಅಳಿಯ ಶುಕ್ರವಾರ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಮಾಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ಡಿ.30ರಂದು ತಾಯಿ ಮನೆಯಲ್ಲಿ ಒಬ್ಬರೇ ಇದ್ದರು. ಈ ವೇಳೆ ವಾಮಾಚಾರ ಮಾಡಿದ್ದಾರೆ ಎಂದು ಆರೋಪಿಸಿ, ನೆರೆಹೊರೆಯವರು ಅವರನ್ನು ಹಿಡಿದು, ಮರದ ಬಡಿಗೆಯಿಂದ ಹೊಡೆದು, ಥಳಿಸಿದ್ದಾರೆ. ನಂತರ ಕಾದ ಕಬ್ಬಿಣದಿಂದ ಕೈ, ಕಾಲುಗಳ ಮೇಲೆ ಬರೆ ಎಳೆದಿದ್ದಾರೆ’ ಎಂದು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗೆ ಬರೆದ ಪತ್ರದಲ್ಲಿ ಅವರ ಪುತ್ರ ತಿಳಿಸಿದ್ದಾರೆ.

ADVERTISEMENT

‘ನಂತರ ಅವರ ಕತ್ತಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ, ಬಲವಂತದಿಂದ ಮೂತ್ರ ಕುಡಿಸಿದ್ದು, ನಾಯಿ ಮಲ ತಿನ್ನುವಂತೆ ಒತ್ತಾಯಿಸಿದ್ದಾರೆ’ ಎಂದು ತಿಳಿಸಿದ್ದಾರೆ.

ಘಟನೆ ನಡೆದ ವೇಳೆ ವೃದ್ಧೆಯ ಮಗ ಹಾಗೂ ಸೊಸೆ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರು. ಜ.5ರಂದು ಈ ವಿಷಯ ಅರಿವಿಗೆ ಬಂದಿದ್ದು, ತಕ್ಷಣವೇ ದೂರು ದಾಖಲಿಸಿದ್ದಾರೆ.

‘ಘಟನೆ ಗಂಭೀರವಾಗಿದ್ದು, ದೂರುದಾರರ ಜೊತೆ ಮಾತನಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿಶಾಲ್‌ ಆನಂದ್‌ ತಿಳಿಸಿದ್ದಾರೆ.

‘ಘಟನೆ ನಡೆದ ಜಾಗವು ಅರಣ್ಯ ಪ್ರದೇಶದ ಒಳಭಾಗದಲ್ಲಿದ್ದು, ಪೊಲೀಸರು ಸ್ಥಳಕ್ಕೆ ತೆರಳಿ ಘಟನೆ ನಡೆದ ಕುರಿತು ಪರಿಶೀಲಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.