ಪೊಲೀಸ್
– ಐಸ್ಟಾಕ್ ಚಿತ್ರ
ಭುವನೇಶ್ವರ: ಭಾರತೀಯ ಜಲಸೀಮೆಗೆ ಪ್ರವೇಶಿಸಿ ಬಂಧನಕ್ಕೊಳಗಾಗಿರುವ 78 ಬಾಂಗ್ಲಾದೇಶಿ ಪ್ರಜೆಗಳನ್ನು ಸ್ವದೇಶಕ್ಕೆ ಕಳುಹಿಸಲು ಒಡಿಶಾ ಪೊಲೀಸರು ಮುಂದಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹಲವು ತಪಾಸಣೆಗಳ ಬಳಿಕ ಅವರು ಬಾಂಗ್ಲಾದೇಶದ ಮೀನುಗಾರರೆಂದು ತಿಳಿದು ಬಂದಿದೆ ಹೀಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪರಾದೀಪ್‌ನ ಪೊಲೀಸ್ ಉಪವರಿಷ್ಠಾಧಿಕಾರಿ ಸಂತೋಷ್ ಜೆನಾ ತಿಳಿಸಿದ್ದಾರೆ.
ಇವರನ್ನು ಭಾರತೀಯ ಕರಾವಳಿ ಪಡೆ, ಒಡಿಶಾ ಪೊಲೀಸ್‌ನ ಅಪರಾಧ ಘಟಕ ಹಾಗೂ ಕೇಂದ್ರೀಯ ಕೈಗಾರಿಕ ಭದ್ರತಾ ಪಡೆ ವಿಚಾರಣೆಗೆ ಒಳಪಡಿಸಿದೆ.
ಭಾರತೀಯ ಕರಾವಳಿ ಕಾವಲು ಪಡೆ ಇವರನ್ನು ಬಂಧಿಸಿ ಪರಾದೀಪ್ ಪೊಲೀಸರಿಗೆ ಹಸ್ತಾಂತರಿಸಿತ್ತು.
ಇವರನ್ನು ಉಭಯ ರಾಷ್ಟ್ರಗಳ ಜಲಗಡಿಯಲ್ಲಿ ಭಾರತೀಯ ಕರಾವಳಿ ಕಾವಲು ಪಡೆಯ ಮೂಲಕ ಬಾಂಗ್ಲಾದೇಶದ ಕರಾವಳಿ ಪಡೆಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತರಲ್ಲಿ ರಾಜೀವ್ ಚಂದ್ರ ಸಿಲ್ ಹಾಗೂ ಆರ್. ಬಿಸ್ವಸ್ ತಮ್ಮ ಅನುಭವ ಹಂಚಿಕೊಂಡಿದ್ದು, ಭದ್ರತಾ ಪಡೆಗಳು ಹಾಗೂ ಪೊಲೀಸ್ ಸಿಬ್ಬಂದಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಆಹಾರ ಕೊಟ್ಟರು ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.