ಭಾರತ ತೊರೆದ 786 ಪಾಕ್ ಪ್ರಜೆಗಳು: 1,465 ಭಾರತೀಯರು ಸ್ವದೇಶಕ್ಕೆ ವಾಪಸ್
ಪಿಟಿಐ ಚಿತ್ರ
ನವದೆಹಲಿ: ಕಳೆದ ಆರು ದಿನಗಳಲ್ಲಿ 55 ರಾಜತಾಂತ್ರಿಕ ಅಧಿಕಾರಿಗಳು ಮತ್ತು ಅವರ ಸಂಬಂಧಿಕರು, ಸಿಬ್ಬಂದಿ ಹಾಗೂ ಪಾಕಿಸ್ತಾನ ವೀಸಾ ಹೊಂದಿದ್ದ 8 ಮಂದಿ ಭಾರತೀಯರು ಸೇರಿ ಒಟ್ಟು 786 ಪಾಕಿಸ್ತಾನದ ಪ್ರಜೆಗಳು ಭಾರತ ತೊರೆದಿದ್ದಾರೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ವೇಳೆ ಏ.24ರಿಂದ, 25 ರಾಜತಾಂತ್ರಿಕ ಅಧಿಕಾರಿಗಳು, ದೀರ್ಘಾವಧಿ ಭಾರತದ ವೀಸಾ ಹೊಂದಿರುವ 151 ಪಾಕಿಸ್ತಾನಿ ಪ್ರಜೆಗಳು ಸೇರಿ ಒಟ್ಟು 1,465 ಭಾರತೀಯರು ಪಂಜಾಬ್‌ನಲ್ಲಿನ ಅಂತರರಾಷ್ಟ್ರೀಯ ಗಡಿ ದಾಟಿ ಪಾಕಿಸ್ತಾನದಿಂದ ಭಾರತಕ್ಕೆ ಬಂದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಏ.22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನದ ನಂಟಿರುವ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಅಮಾಯಕರು ಉಸಿರು ಚೆಲ್ಲಿದ್ದರು. ಘಟನೆಯ ಬಳಿಕ ಕೇಂದ್ರ ಸರ್ಕಾರ ಪಾಕಿಸ್ತಾನ ನಾಗರಿಕರಿಗೆ ‘ಭಾರತದಿಂದ ತೊಲಗಿ’ ಎಂದಿತ್ತು.
ಸಾರ್ಕ್ ವೀಸಾ ಹೊಂದಿದ್ದವರಿಗೆ ಏ.25, ವೈದ್ಯಕೀಯ ಚಿಕಿತ್ಸೆಗಾಗಿ ವೀಸಾ ಪಡೆದು ಬಂದಿದ್ದವರಿಗೆ ಏ.29 ಹಾಗೂ ಉದ್ಯಮ, ಪತ್ರಕರ್ತರು, ಪ್ರವಾಸಿಗರು, ವಿದ್ಯಾರ್ಥಿಗಳು ಸೇರಿ 12 ರೀತಿಯ ವೀಸಾ ಪಡೆದಿದ್ದವರಿಗೆ ದೇಶ ತೊರೆಯಲು ಏ.27ರವರೆಗೆ ಕಾಲಾವಕಾಶ ನೀಡಲಾಗಿತ್ತು.
ಭಾರತ ಕೂಡ ಇಸ್ಲಾಮಾಬಾದ್‌ನಲ್ಲಿನ ಭಾರತ ಹೈಕೈಮಿಷನ್ ಅನ್ನು ವಾಪಸ್ ಕರೆಸಿಕೊಂಡಿದೆ. ಆದರೆ ದೀರ್ಘಾವಧಿ ವೀಸಾ, ಅಧಿಕೃತ ವೀಸಾ ಇರುವವರನ್ನು ಈ ಪ್ರಕ್ರಿಯೆಯಿಂದ ಹೊರಗುಳಿಸಲಾಗಿದೆ.
ನವದೆಹಲಿಯ ಪಾಕ್ ಹೈಕಮಿಷನ್ ಕಚೇರಿಯಲ್ಲಿರುವ ಸೇನಾ, ನೌಕಾಪಡೆ ಮತ್ತು ವಾಯುಪಡೆ ಸಲಹೆಗಾರರಿಗೆ ಒಂದು ವಾರದ ಒಳಗಾಗಿ ದೇಶ ತೊರೆಯುವಂತೆ ಏ.23ರಂದು ಸೂಚಿಸಲಾಗಿತ್ತು. ಇವರ ಐವರು ಸಹಾಯಕ ಸಿಬ್ಬಂದಿಗೂ ಇದೇ ಸೂಚನೆ ನೀಡಲಾಗಿತ್ತು.
ಆದರೆ ದೀರ್ಘಾವಧಿಯ, ರಾಜತಾಂತ್ರಿಕ ಅಥವಾ ಅಧಿಕೃತ ವೀಸಾಗಳನ್ನು ಹೊಂದಿರುವವರಿಗೆ ‘ಭಾರತ ಬಿಟ್ಟು ತೊಲಗಿ’ ಆದೇಶದಿಂದ ವಿನಾಯಿತಿ ನೀಡಲಾಗಿದೆ. ಭಾರತವು ಇಸ್ಲಾಮಾಬಾದ್‌ನಲ್ಲಿರುವ ಪಾಕ್ ಹೈಕಮಿಷನ್ ಕಚೇರಿಯ ತನ್ನ ಅಧಿಕಾರಿಗಳನ್ನು ವಾಪಸ್ ಕರೆಸಿಕೊಂಡಿದೆ.
ಕೆಲವು ಪಾಕಿಸ್ತಾನಿ ಪ‍್ರಜೆಗಳು ವಿಮಾನಗಳ ಮೂಲಕವೂ ಭಾರತವನ್ನು ತೊರೆದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತ– ಪಾಕಿಸ್ತಾನ ನಡುವೆ ನೇರ ವಿಮಾನ ಸಂಚಾರ ಇಲ್ಲದ ಕಾರಣ ಅವರು ಮೂರನೇ ದೇಶದ ಮೂಲಕ ತೆರಳಿರಬಹುದು ಎಂದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಏ.25ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕರೆ ಮಾಡಿ, ನಿಗದಿತ ಗಡುವು ಮೀರಿದ ಬಳಿಕ ಪಾಕಿಸ್ತಾನದ ಯಾವುದೇ ಪ್ರಜೆ ಭಾರತದಲ್ಲಿ ಉಳಿಯದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದ್ದರು.
ವಿವಿಧ ದಿನಗಳಲ್ಲಿ ಪಾಕ್‌ಗೆ ತೆರಳಿದವರು
ಏ.24;28
ಏ.25;191
ಏ.26;81
ಏ.27;237
ಏ.28;145
ಏ.29;94
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.