ADVERTISEMENT

ಹೈದರಾಬಾದ್‌ ಮೃಗಾಲಯದ 8 ಸಿಂಹಗಳಲ್ಲಿ ಕೋವಿಡ್ ದೃಢ

ಪ್ರಾಣಿಗಳಲ್ಲಿ ಕೊರೊನಾ ಸೋಂಕು ಪತ್ತೆ ಇದೇ ಮೊದಲು

​ಪ್ರಜಾವಾಣಿ ವಾರ್ತೆ
Published 4 ಮೇ 2021, 16:14 IST
Last Updated 4 ಮೇ 2021, 16:14 IST
ಪ್ರಾತಿನಿಧಿಕ ಚಿತ್ರ  –ಎಎಫ್‌ಪಿ ಚಿತ್ರ
ಪ್ರಾತಿನಿಧಿಕ ಚಿತ್ರ  –ಎಎಫ್‌ಪಿ ಚಿತ್ರ   

ಹೈದರಾಬಾದ್‌: ನಗರದ ನೆಹರೂ ಮೃಗಾಲಯದಲ್ಲಿರುವ 8 ಏಷ್ಯಾಟಿಕ್‌ ಸಿಂಹಗಳಲ್ಲಿ ಕೋವಿಡ್‌–19 ದೃಢಪಟ್ಟಿದೆ. ಪ್ರಾಣಿಗಳಲ್ಲಿಯೂ ಕೊರೊನಾ ಸೋಂಕು ಪತ್ತೆಯಾದ ಮೊದಲ ಪ್ರಕರಣ ಇದಾಗಿದೆ.

‘ದೇಶವೇ ಕೋವಿಡ್‌–19 ವಿರುದ್ಧ ಹೋರಾಡುತ್ತಿರುವ ಈ ಸಂದರ್ಭದಲ್ಲಿ ಪ್ರಾಣಿಗಳಲ್ಲಿಯೂ ಸಾರ್ಸ್‌–ಕೋವ್‌–2 ವೈರಸ್‌ನ ಸೋಂಕು ಪತ್ತೆ ಮಾಡುವುದು ಇಂದಿನ ತುರ್ತು. ಕೋವಿಡ್‌ ನಿರ್ವಹಣೆ ದೃಷ್ಟಿಯಿಂದ ಇದು ಅಗತ್ಯ’ ಎಂದು ತಜ್ಞರು ಪ್ರತಿಪಾದಿಸಿದ್ದಾರೆ.

‘ಸಿಂಹಗಳಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ಈ ಹಿನ್ನೆಲೆಯಲ್ಲಿ ಅವುಗಳ ಮೂಗು ಹಾಗೂ ಬಾಯಿಯ ದ್ರವಗಳ ಮಾದರಿಗಳನ್ನು ಸಂಗ್ರಹಿಸಲಾಯಿತು. ನಗರದಲ್ಲಿರುವ ಸೆಂಟರ್‌ ಫಾರ್‌ ಸೆಲ್ಯುಲಾರ್ ಆ್ಯಂಡ್‌ ಮಾಲೆಕ್ಯುಲರ್ ಬಯೋಲಜಿಯ (ಸಿಸಿಎಂಬಿ) ಪ್ರಯೋಗಾಲಯದಲ್ಲಿ ಆರ್‌ಟಿ–ಪಿಸಿಆರ್‌ ಪರೀಕ್ಷೆ ನಡೆಸಿದಾಗ, 8 ಸಿಂಹಗಳಲ್ಲಿ ಕೋವಿಡ್‌ ಇರುವುದು ದೃಢಪಟ್ಟಿತು’ ಎಂದು ಮೃಗಾಲಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

‘ದೇಶದ ಮೃಗಾಲಯಗಳಲ್ಲಿರುವ ಸಾಕು ಪ್ರಾಣಿ ಅಥವಾ ವನ್ಯಮೃಗದಲ್ಲಿ ಕೋವಿಡ್‌–19 ದೃಢಪಟ್ಟ ಮೊದಲ ಪ್ರಕರಣ ಇದಾಗಿದೆ’ ಎಂದು ಸಿಸಿಎಂಬಿಯ ಸಲಹೆಗಾರ ಡಾ.ರಾಕೇಶ್‌ ಮಿಶ್ರಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಳವಳಪಡುವ ಅಗತ್ಯ ಇಲ್ಲ. ಸಿಂಹಗಳು ಚಿಕಿತ್ಸೆಗೆ ಸ್ಪಂದಿಸುತ್ತಿವೆ. ಚೆನ್ನಾಗಿ ಆಹಾರ ಸೇವಿಸುತ್ತಿವೆ’ ಎಂದು ಮೃಗಾಲಯ ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.