ADVERTISEMENT

ಪುಟಿದೇಳಲಿ ಕೇರಳ: ಎಂಟು ದಿನ ಅನಾಮಿಕರಾಗಿ ಸೇವೆ ಸಲ್ಲಿಸಿದ ಐಎಎಸ್ ಅಧಿಕಾರಿ

ಏಜೆನ್ಸೀಸ್
Published 6 ಸೆಪ್ಟೆಂಬರ್ 2018, 6:14 IST
Last Updated 6 ಸೆಪ್ಟೆಂಬರ್ 2018, 6:14 IST
ಕಣ್ಣನ್‌ ಗೋಪಿನಾಥನ್‌
ಕಣ್ಣನ್‌ ಗೋಪಿನಾಥನ್‌   

ತಿರುವನಂತಪುರ: ಪ್ರವಾಹದಿಂದ ತತ್ತರಿಸಿದ್ದ ಕೇರಳದಲ್ಲಿ ಐಎಎಸ್‌ ಅಧಿಕಾರಿಯೊಬ್ಬರು ತಾನು ಯಾರೆಂದು ಹೇಳದೆಯೇ ಎಂಟು ದಿನಗಳ ಕಾಲ ಸ್ವಯಂಸೇವಕರಾಗಿ ಅವರ ಸಂಕಷ್ಟಗಳಿಗೆ ಹೆಗಲುಕೊಟ್ಟಿದ್ದಾರೆ.

–ಯಾರಿವರೆಂದು ಯೋಚಿಸುತ್ತಿದ್ದೀರಾ? ಕೇಂದ್ರಾಡಳಿತ ಪ್ರದೇಶವಾದ ದಾದ್ರ ಮತ್ತು ನಗರ್‌ ಹವೇಲಿಯ ಜಿಲ್ಲಾಧಿಕಾರಿ ಕಣ್ಣನ್‌ ಗೋಪಿನಾಥನ್‌.

ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿಗೆ ₹1 ಕೋಟಿಯ ಚೆಕ್‌ ನೀಡುವ ಸಲುವಾಗಿಆಗಸ್ಟ್ 26ರಂದು ಅವರು ಇಲ್ಲಿಗೆ ಬಂದಿದ್ದರು. ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಚೆಕ್ ನೀಡುವ ಕೆಲಸ ಮುಗಿಯುತ್ತಿದ್ದಂತೆ,ಸ್ವಂತ ಊರಾದ ಪುಥುಪಳ್ಳಿಗೆ ಹೋಗುವುದನ್ನು ಬಿಟ್ಟುಪ್ರವಾಹ ಪೀಡಿತರಿಗೆ ನೆರವಾಗಲು ತಿರುವನಂತಪುರದ ಕಡೆ ಪ್ರಯಾಣ ಬೆಳೆಸಿದರು.

ADVERTISEMENT

ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದ ಪ್ರದೇಶಗಳಾದ ಚೆಂಗನೂರಿಗೆ ಹೋಗಿ ವಿವಿಧ ಪರಿಹಾರ ಶಿಬಿರಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದರು.ಕೊಚ್ಚಿಗೆ ಟ್ರಕ್ಸ್‌ಗಳಲ್ಲಿ ಬರುತ್ತಿದ್ದ ಪರಿಹಾರ ಸಾಮಗ್ರಿಗಳ ದೊಡ್ಡ ದೊಡ್ಡ ಬಾಕ್ಸ್‌ಗಳನ್ನು ತಲೆಯ ಮೇಲೆಯೇ ಹೊತ್ತುಕೊಂಡು ಪರಿಹಾರ ಕೇಂದ್ರಗಳಿಗೆ ಸಾಗಿಸಿದ್ದಾರೆ. ‘ಯಾರು ನೀವು’ ಎಂದು ಜನ ಪ್ರಶ್ನಿಸಿದಾಗ, ಸರ್ಕಾರೇತರ ಸಂಸ್ಥೆಯೊಂದರ ಸ್ವಯಂಸೇವಕ ಎಂದು ಹೇಳಿಕೊಂಡಿದ್ದರು.

ಹೀಗೆ ಸದ್ದಿಲ್ಲದೆ ನಡೆಯುತ್ತಿದ್ದ ಇವರ ಸೇವೆ ತಿಳಿದದ್ದು, ಎರ್ನಾಕುಲಂ ಜಿಲ್ಲಾಧಿಕಾರಿವೈ.ಸಫೀರುಲ್ಲ ಪರಿಹಾರ ಶಿಬಿರಕ್ಕೆ ಭೇಟಿ ನೀಡಿದ ನಂತರವೇ. ಅವರ ಈ ನಡೆ ಬಗ್ಗೆ ಹೆಚ್ಚು ಮಾತನಾಡಲು ಇಚ್ಛಿಸದ ಗೋಪಿನಾಥನ್‌, ‘ನಾನೇನು ಅಂಥ ಅದ್ಭುತ ಕೆಲಸ ಮಾಡಿಲ್ಲ. ಅಲ್ಲಿನ ಪರಿಸ್ಥಿತಿ ಬಗ್ಗೆ ತಿಳಿಯಲು ಭೇಟಿ ನೀಡಿದ ಜನರಲ್ಲಿ ನಾನೂ ಒಬ್ಬ. ಹಾನಿಯಾದ ಪ್ರದೇಶಗಳಲ್ಲಿಯೇ ಇದ್ದುಕೊಂಡು ಕೆಲಸ ಮಾಡಿದ ಅಧಿಕಾರಿಗಳೊಂದಿಗೆ, ಸೇನೆಯ ಸಿಬ್ಬಂದಿಯೊಂದಿಗೆ ಮಾತನಾಡಿ, ಅವರು ನಿಜವಾದ ಹೀರೊಗಳು’ ಎಂದು ಹೇಳಿದರು.

‘ದಯವಿಟ್ಟು ಇದನ್ನು ದೊಡ್ಡ ಸುದ್ದಿ ಮಾಡಬೇಡಿ. ನಾನು ಅಲ್ಲಿ ಬಂದು ಕೆಲಸ ಮಾಡಿದ್ದನ್ನು ವೈಭವೀಕರಿಸಿದರೆ, ಕಠಿಣ ಪರಿಸ್ಥಿತಿಯಲ್ಲಿ ಪ್ರಾಣವನ್ನೂ ಲೆಕ್ಕಿಸದೆ ಕೆಲಸ ಮಾಡಿದವರಿಗೆ ಅನ್ಯಾಯ ಮಾಡಿದಂತಾಗುತ್ತದೆ’ ಎಂದರು.

‘ನನ್ನ ಪರಿಚಯ ತಿಳಿದಾಗ ಜನ ನನ್ನ ಜೊತೆ ಸೆಲ್ಫಿ ಕ್ಲಿಕ್ಕಿಸಲು ಮುಗಿಬಿದ್ದರು. ಇದರಿಂದ ನನಗೆ ಬಹಳ ಮುಜುಗರವಾಯಿತು. ಇನ್ನು ಕೆಲವು ಅಧಿಕಾರಿಗಳು ‘ಏನಾದರೂ ಕಟುವಾಗಿ ಮಾತನಾಡಿದ್ದರೆ ಕ್ಷಮಿಸಿ’ ಎಂದೆಲ್ಲ ಹೇಳಿದರು. ಇನ್ನೂ ಅಲ್ಲಿದ್ದರೆ ಸರಿ ಇರುವುದಿಲ್ಲ ಎಂದು ತಿಳಿದು ವಾಪಾಸ್ಸಾದೆ. ಇದೆಲ್ಲದರ ನಡುವೆ ನನಗೆ ಖುಷಿ ಕೊಟ್ಟ ವಿಚಾರವೆಂದರೆ,ಈಶಾನ್ಯ ಭಾಗವೂ ಸೇರಿದಂತೆ ದೇಶದ ನಾನಾ ಕಡೆಗಳಿಂದ ಅಲ್ಲಿಗೆ ಸ್ವಯಂಸೇವಕರು ಬಂದಿದ್ದು’ ಎಂದು ಅನುಭವ ಹಂಚಿಕೊಂಡರು.

ರಜೆ ದಾಖಲಿಸಲಿಲ್ಲ: ಕೇರಳದಿಂದ ವಾಪಾಸ್‌ ಕಚೇರಿಗೆ ಹೋದ ನಂತರ ಎಂಟು ದಿನಗಳ ಸಾಂದರ್ಭಿಕ ರಜೆಯನ್ನು ಅವರು ಹಾಕಿದರೂ, ದಾದ್ರಾ ಮತ್ತು ನಗರ್ ಹವೇಲಿ ಆಡಳಿತ ಸರ್ಕಾರಿ ಕೆಲಸದ ನಿಮಿತ್ತ ಪ್ರವಾಸ ಕೈಗೊಂಡಿದ್ದಾರೆ ಎಂದು ದಾಖಲು ಮಾಡಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.