
ಚೆನ್ನೈ: ಚುನಾವಣಾ ಆಯೋಗವು ತಮಿಳುನಾಡಿನಲ್ಲಿ ನಡೆಸುತ್ತಿರುವ ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣಾ (ಎಸ್‌ಐಆರ್) ಕಾರ್ಯ ಪ್ರಗತಿಯಲ್ಲಿದ್ದು, ಇದೇ 19ರಂದು ಮತದಾರರ ಪಟ್ಟಿಯ ಕರಡು ಪ್ರತಿ ಬಿಡುಗಡೆ ಮಾಡಲಿದೆ. ಕರಡು ಪ್ರತಿಯಲ್ಲಿ ಸುಮಾರು 80 ಲಕ್ಷ ಮತದಾರರ ಹೆಸರನ್ನು ಕೈಬಿಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಈ 80 ಲಕ್ಷ ಜನರ ಪೈಕಿ 27 ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರೆ, 40 ಲಕ್ಷ ಜನರು ತಮ್ಮ ನಿವಾಸಗಳನ್ನು ಶಾಶ್ವತವಾಗಿ ಸ್ಥಳಾಂತರಿಸಿದ್ದಾರೆ. 4 ಲಕ್ಷ ಜನರು ಪತ್ತೆಯಾಗಿಲ್ಲ ಹಾಗೂ 4 ಲಕ್ಷ ಜನರು ಎರಡು ನಮೂದುಗಳನ್ನು ಹೊಂದಿದ್ದಾರೆ ಎಂದು ಮೂಲಗಳು ಹೇಳಿವೆ.
‘ಕರಡು ಪಟ್ಟಿಯಲ್ಲಿ ರಾಜ್ಯದ 80 ಲಕ್ಷ ಮತದಾರರು ಕಡಿಮೆಯಾಗುವ ಸಾಧ್ಯತೆಗಳಿವೆ. ವಿಳಾಸ ಬದಲಿಸಿರುವ 40 ಲಕ್ಷ ಜನರಲ್ಲಿ ಹೆಚ್ಚಿನವರು ಎಸ್‌ಐಆರ್‌ನ ಅಂತಿಮ ಪಟ್ಟಿ ಬಿಡುಗಡೆಗೂ ಮುನ್ನ, ಅಂದರೆ ಫೆಬ್ರುವರಿ ತಿಂಗಳೊಳಗೆ ಹಾಲಿ ವಿಳಾಸದೊಂದಿಗೆ ಮತದಾರರಾಗಿ ದಾಖಲಾಗುವ ಸಾಧ್ಯತೆಗಳಿವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.
‘ಕರಡು ಪಟ್ಟಿ ಬಿಡುಗಡೆಯಾದ ಬಳಿಕವಷ್ಟೇ ಎಷ್ಟು ಮತದಾರರ ಹೆಸರನ್ನು ಅಳಿಸಲಾಗಿದೆ ಎಂಬುದು ಖಚಿತವಾಗಿ ಗೊತ್ತಾಗುತ್ತದೆ’ ಎಂದು ಅವರು ಹೇಳಿದ್ದಾರೆ.
‘ಮತದಾರರ ಪಟ್ಟಿಯ ಕರಡು ಪ್ರತಿ ಬಿಡುಗಡೆಯಾದ ನಂತರ ಅಂತಿಮ ಪಟ್ಟಿ ಬಿಡುಗಡೆಯಾಗಲು 45 ದಿನಗಳವರೆಗೆ ಸಮಯ ಇರುತ್ತದೆ. ಈ ಅವಧಿಯಲ್ಲಿ ಲಕ್ಷಾಂತರ ಜನರು ಮೇಲ್ಮನವಿ ಸಲ್ಲಿಸಬಹುದು ಅಥವಾ ಹೊಸ ಮತದಾರರಾಗಿ ಸೇರ್ಪಡೆ ಆಗಬಹುದು’ ಎಂದು ಅವರು ತಿಳಿಸಿದ್ದಾರೆ.
ಕರಡು ಪ್ರತಿಯಿಂದ ಅಳಿಸಲಾಗುವ ಪ್ರತಿ ಮತದಾರರಿಗೂ ಅದಕ್ಕೆ ಕಾರಣವನ್ನು ನಮೂದಿಸಲಾಗುತ್ತದೆ. ಇದು ಅವರಿಗೆ ಮೇಲ್ಮನವಿ ಸಲ್ಲಿಸಲು ನೆರವಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಡಿಸೆಂಬರ್ 11ರವರೆಗೆ 6.41 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಎಲ್ಲವನ್ನೂ ಡಿಜಿಟಲೀಕರಿಸಲಾಗಿದೆ. ಇದೇ 19ರಂದು ಮತದಾರರ ಪಟ್ಟಿಯ ಕರಡು ಪ್ರತಿ ಬಿಡುಗಡೆಗೆ ಬಿಎಲ್‌ಒಗಳು ಸಿದ್ಧತೆಯಲ್ಲಿ ತೊಡಗಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ತಿಳಿಸಿದ್ದಾರೆ.